ಗೋಪೇಶ್ವರ, ಫೆ.19 (DaijiworldNews/HR): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹಕ್ಕೆ ಸಿಲುಕಿದ್ದವರ ಪತ್ತೆ ಕಾರ್ಯ 13 ನೇ ದಿನವೂ ಮುಂದುವರಿದಿದ್ದು, ಮೃತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

ಎನ್ಟಿಸಿ ತಪೋವನ-ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಗುರುವಾರ ರಾತ್ರಿ ಒಂದು ಶವ ಪತ್ತೆಯಾಗಿದ್ದು, ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ ಎಂದು ಚಮೋಲಿ ಜಿಲ್ಲಾ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಇನ್ನು ಈವರೆಗೆ ಒಟ್ಟು 62 ಶವಗಳು ಪತ್ತೆಯಾಗಿದ್ದು, 142 ಜನರು ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ ತಪೋವನ-ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ 13 ಶವಗಳು ಪತ್ತೆಯಾಗಿವೆ. ಇದನ್ನು ಹೊರತುಪಡಿಸಿ ಹಲವೆಡೆ 28 ಕೈಕಾಲುಗಳು ಸಿಕ್ಕಿವೆ. ಪತ್ತೆಯಾಗಿರುವ 62 ಶವಗಳಲ್ಲಿ 33 ಜನರನ್ನು ಗುರುತಿಸಲಾಗಿದ್ದು, ಉಳಿದವರ ಡಿಎನ್ಎಗಳನ್ನು ಸಂರಕ್ಷಿಸಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.