ಚಿಕ್ಕಬಳ್ಳಾಪುರ, ಫೆ.19 (DaijiworldNews/PY): ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, "ಯಾರಿಗೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಆಗುವುದಿಲ್ಲವೋ ಅವರು ಕೊಡುವುದು ಬೇಡ. ನಾವು ಯಾರಿಗೂ ಕೂಡಾ ಒತ್ತಾಯ ಮಾಡುತ್ತಿಲ್ಲ" ಎಂದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, "ಟೀಕೆ ಮಾಡುತ್ತಿರುವವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಶ್ರೀರಾಮ ಅಯೋಧ್ಯೆಯಲ್ಲಿ ನೆಲೆಸಿದ್ದ ಎನ್ನುವುದು ಹಿಂದೂ ಧರ್ಮದಲ್ಲಿ ಇದೆ. ಹಾಗಾಗಿ ಶ್ರೀರಾಮಚಂದ್ರ ನಮ್ಮ ಆರಾಧ್ಯ ದೈವ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೋರ್ವರ ಕೊಡುಗೆ ಇರಬೇಕು ಎನ್ನುವುದು ನಮ್ಮ ಭಾವನೆ. ಆದರೆ, ದೇಣಿಗೆ ಯಾರಿಗೆ ನೀಡಲು ಆಗುವುದಿಲ್ಲವೋ ಅವರು ದೇಣಿಗೆ ನೀಡುವುದು ಬೇಡ. ಯಾರಿಗೂ ಕೂಡಾ ನಾವು ಬಲವಂತ ಮಾಡುತ್ತಿಲ್ಲ. ಈ ವಿಚಾರದ ಬಗ್ಗೆ ಸಿದ್ದರಾಮಯ್ಯಾ ಆಗಲಿ, ಕುಮಾರಸ್ವಾಮಿ ಆಗಲಿ ಟೀಕೆ ಮಾಡಬಾರದು" ಎಂದು ಹೇಳಿದ್ದಾರೆ.
"ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಬಗ್ಗೆ ಈಗಾಗಲೇ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ. ಕೆಲವು ಮಂದಿ ಕೊರೊನಾ ಕಡಿಮೆಯಾಗಿದೆ ಎಂದು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಬಗ್ಗೆ ಜನರಿ ಎಚ್ಚರಿಕೆ ವಹಿಸಬೇಕು" ಎಂದು ಸೂಚಿಸಿದ್ದಾರೆ.
ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರದ ಬಗ್ಗೆ ಸುದೀರ್ಘವಾದ ಚರ್ಚೆಯಾಗಿದೆ. ಎಲ್ಲಾ ಸಚಿವರು ಕೂಡಾ ಅವರವರ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಎಲ್ಲಾ ಸಮುದಾಯಗಳಿಗೂ ಕೂಡಾ ನ್ಯಾಯ ಒದಗಿಸುವ ಆಶಯ ಹೊಂದಿದ್ದೇವೆ. ಸಂವಿಧಾನದ ಆಶಯದ ಪ್ರಕಾರ ನೊಂದವರಿಗೆ ಮೀಸಲಾತಿ ಸಿಗಲಿದೆ" ಎಂದಿದ್ದಾರೆ.
"ಯಾರೂ ಕೂಡಾ ಬಹಿರಂಗವಾಗಿ ಎಲ್ಲಿಯೂ ಮೀಸಲಾತಿ ವಿಚಾರದ ಬಗ್ಗೆ ಮಾತನಾಡಬಾರದು. ಏನೇ ಅಭಿಪ್ರಾಯಗಳಿದ್ದರೂ ಕೂಡಾ ಸಿಎಂ ಅವರ ಗಮನಕ್ಕೆ ತರಬೇಕು. ಎಲ್ಲಾ ಸಮುದಾಯಗಳು ಕೂಡಾ ಮೀಸಲಾತಿ ಕೇಳುತ್ತಿದ್ದು, ಈ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು" ಎಂದು ಎಚ್ಚರಿಕೆ ನೀಡಿದ್ದಾರೆ.