ಬೆಂಗಳೂರು, ಫೆ.19 (DaijiworldNews/MB) : ''ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ 'ರಾವಣ ರಾಜ್ಯ'ಕ್ಕೆ ಉದಾಹರಣೆಯಾಗಿದೆ. ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳಿ ಬಾರದಿರುವುದೇ ಯೋಗಿ ಸಾಧನೆ'' ಎಂದು ಕಾಂಗ್ರೆಸ್ ನಾಯಕ ಗುಂಡೂರಾವ್ ಟೀಕಿಸಿದ್ದಾರೆ.

ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಬಾಬುರಾಹಾ ಹಳ್ಳಿಯಲ್ಲಿ ಮೂವರು ಅಪ್ರಾಪ್ತ ದಲಿತ ಬಾಲಕಿಯ ದನಕರುಗಳಿಗೆ ಹಸಿರು ಮೇವು ತರಲು ಅರಣ್ಯಕ್ಕೆ ಹೋಗಿದ್ದು, ಅದರಲ್ಲಿ ಇಬ್ಬರು ಶವವಾಗಿ ಮತ್ತು ಮತ್ತೊಬ್ಬ ಬಾಲಕಿ ಅಸ್ವಸ್ಥಳಾಗಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಂತ್ರಸ್ತ ಬಾಲಕಿಯರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ''ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಗಿಡುಗನ ಬಾಯಲ್ಲಿ ಸಿಕ್ಕ ಪಾರಿವಾಳದಂತಾಗಿದೆ. 'ರಾವಣ ರಾಜ್ಯ'ದ ಉದಾಹರಣೆಯಿದು. ಮನೆಯಿಂದ ಹೊರಬಂದ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳಿ ಬಾರದಿರುವುದೇ ಯೋಗಿ ಸಾಧನೆ. ರಾಜ್ಯ ಬಿಜೆಪಿ ನಾಯಕರು ಬಾಯಿ ಬಡಿದುಕೊಳ್ಳುತ್ತಿರುವ ಉತ್ತರ ಪ್ರದೇಶದ ಮಾದರಿ ಇದೇನಾ?'' ಎಂದು ಪ್ರಶ್ನಿಸಿದ್ದಾರೆ.