ಬೆಂಗಳೂರು, ಫೆ.19 (DaijiworldNews/PY): "ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ವಾರಿಯರ್ಗಳಿಗೆ ಪರಿಹಾರ ನೀಡದೇ ಅಮಾನವೀಯವಾಗಿ ನಡೆದುಕೊಂಡಿದೆ. ಇದೊಂದು ಅಸಮರ್ಥ, ನಾಲಾಯಕ್ ಸರ್ಕಾರ" ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಹೇಳಿದ್ದಾರೆ.

ಶುಕ್ರವಾದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾ ವಾರಿಯರ್ಸ್ಗಳಾಗಿ ದುಡಿದು ಮಡಿದವರಿಗೆ ಶೀಘ್ರವೇ 30 ಲಕ್ಷ. ರೂ.ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
"ಸರ್ಕಾರವೇ ಘೋಷಣೆ ಮಾಡಿದ್ದ 30 ಲಕ್ಷ. ರೂ. ಪರಿಹಾರವನ್ನು ಬಿಬಿಎಂಪಿಯ 17 ಮಂದಿ ಸಿಬ್ಬಂದಿಗಳ ಕುಟುಂಬಗಳಿಗೆ ಇನ್ನು ಕೂಡಾ ತಲುಪಿಸದೇ ಇರುವುದು ಅಮಾನವೀಯ ವರ್ತನೆ. ಕೊರೊನಾ ವೇಳೆ ನಡೆದ ವ್ಯಾಪಕ ಭ್ರಷ್ಟಾಚಾರದಿಂದ ತನ್ನ ಜೇಬು ತುಂಬಿಸಿಕೊಂಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರದ ಬೊಕ್ಕಸ ಖಾಲಿ ಮಾಡಿ, ತಾವೇ ಘೋಷಣೆ ಮಾಡಿರುವ ಪರಿಹಾರದ ನೀಡಲು ಹಣವಿಲ್ಲದಷ್ಟು ಈ ಬೊಕ್ಕಸವನ್ನು ಬರಿದು ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
"ಕೊರೊನಾ ಯೋಧರು ಮೃತಪಟ್ಟ ಮರುಕ್ಷಣವೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು 1 ಕೋಟಿ ರೂ. ಪರಿಹಾರ ನೀಡುತ್ತಿದ್ದಾರೆ. ಕಳೆದ ಗುರುವಾರ ಸಾವನ್ನಪ್ಪಿ ಇಬ್ಬರು ಕೊರೊನಾ ಯೋಧರ ಕುಟುಂಬಗಳನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದ್ದಾರೆ. ಕೇವಲ 60 ಸಾವಿರ ಕೋಟಿ ಬಜೆಟ್ ಹೊಂದಿರುವ ರಾಜ್ಯ ಇಷ್ಟು ಪ್ರಮಾಣದಲ್ಲಿ ಪರಿಹಾಣ ನೀಡುತ್ತದೆ ಎಂದರೆ, ಇನ್ನು ಲಕ್ಷ, ಕೋಟಿ ಲೆಕ್ಕದಲ್ಲಿ ಬಜೆಟ್ ಮಾಡುವ ನಿಮಗೆ ಪರಿಹಾರ ನೀಡಲು ಯಾವ ಸಮಸ್ಯೆ ಇದೆ" ಎಂದು ಕೇಳಿದ್ದಾರೆ.
"ಶೀಘ್ರವೇ ಬಿಬಿಎಂಪಿ ಹಾಗೂ ಇತರೆ ಇಲಾಖೆಗಳಲ್ಲಿ ಕೊರೊನಾ ವಾರಿಯರ್ಗಳಾಗಿ ಕರ್ತವ್ಯ ನಿರ್ವಹಿಸಿ ಸಾವನ್ನಪ್ಪಿದ ಸಿಬ್ಬಂದಿಗಳ ಕುಟುಂಬಗಳಿಗೆ 30 ಲಕ್ಷ.ರೂ.ಪರಿಹಾರ ನೀಡಬೇಕು. ಪರಿಹಾರ ನೀಡದೇ ಇದ್ದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು" ಎಂದಿದ್ದಾರೆ.