ಬೆಂಗಳೂರು, ಫೆ.19 (DaijiworldNews/MB) : ''ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ ಗಲಭೆಯಲ್ಲಿ ಹಾನಿಗೊಳಗಾದ ಆಸ್ತಿಗಳ ಮಾಲೀಕರ ಪೈಕಿ ಮೂರು ಮಂದಿ ಮಾತ್ರ ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ'' ಎಂದು ಘಟನೆಯ ಕ್ಲೇಮ್ ಕಮಿಷನರ್ ಆಗಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಆಸ್ತಿ ಹಾನಿಗೆ ಒಳಗಾದವರು ಅರ್ಜಿ ಸಲ್ಲಿಸಲು ಫೆಬ್ರವರಿ 28ರವೆರಗೂ ಕಾಲಾವಕಾಶ ನೀಡಲಾಗಿತ್ತು. ಆದರೆ ಈವರೆಗೆ ಮೂರು ಅರ್ಜಿಗಳು ಮಾತ್ರ ಬಂದಿದೆ. ಮಾಹಿತಿ ಕೊರತೆ ಅಥವಾ ಬೇರೆ ಯಾವುದಾದರೂ ಕಾರಣದಿಂದ ಜನರು ಅರ್ಜಿ ಸಲ್ಲಿಸದಿರಬಹುದು. ಅರ್ಜಿ ಸಲ್ಲಿಕೆಗೆ ನೀಡಿರುವ ಕಾಲಾವಕಾಶವನ್ನು ವಿಸ್ತರಿಸಲಾಗುವುದು'' ಎಂದು ತಿಳಿಸಿದರು.
''ಈ ಘಟನೆಗೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ 50 ಪ್ರಕರಣಗಳು ದಾಖಲಾಗಿವೆ. ಅವರೆಲ್ಲರೂ ಆಸ್ತಿ ನಷ್ಟ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಪೊಲೀಸ್ ಠಾಣೆಗಳಲ್ಲಿ ಲಭ್ಯವಿರುವ ದಾಖಲೆಗಳನ್ನೂ ವಿಚಾರಣೆ ವೇಳೆ ಆಧಾರವಾಗಿ ಬಳಸಿಕೊಳ್ಳಲಾಗುವುದು'' ಎಂದರು.
''ಹಾಗೆಯೇ ಜನರು ಅರ್ಜಿಯೊಂದಿಗೆ ನಷ್ಟಕ್ಕೀಡಾಗಿರುವ ಆಸ್ತಿಗೆ ಸಂಬಂಧಿಸಿದ ದಾಖಲೆ, ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರತಿ, ವಿಡಿಯೊ ತುಣುಕು ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಬಳಿಕ ಮೌಲ್ಯಮಾಪನ ನಡೆಸಿ ಹೈಕೋರ್ಟ್ಗೆ ವರದಿ ಸಲ್ಲಿಸಿ ಅದರ ಆಧಾರದಲ್ಲಿ ಗಲಭೆಗೆ ಕಾರಣವಾದ ವ್ಯಕ್ತಿ ಅಥವಾ ಸಂಘಟನೆಗಳಿಂದ ನಷ್ಟ ವಸೂಲಿ ಮಾಡಬಹುದಾಗಿದೆ'' ಎಂದು ತಿಳಿಸಿದರು.
ಪ್ರವಾದಿ ವಿರುದ್ದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ಟ್ವೀಟ್ ಮಾಡಿದ್ದ ವಿಚಾರದಲ್ಲಿ 2020ರ ಆಗಸ್ಟ್ 11ರಂದು ಈ ಗಲಭೆ ನಡೆದಿದ್ದು ಭಾರೀ ಆಸ್ತಿ ಪಾಸ್ತಿಗಳು ನಷ್ಟವಾಗಿದೆ.