ಲಖನೌ, ಫೆ.19 (DaijiworldNews/HR): ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಬಾಬುರಾಹಾ ಹಳ್ಳಿಯಲ್ಲಿ ಮೂವರು ಅಪ್ರಾಪ್ತ ದಲಿತ ಬಾಲಕಿಯ ದನಕರುಗಳಿಗೆ ಹಸಿರು ಮೇವು ತರಲು ಅರಣ್ಯಕ್ಕೆ ಹೋಗಿದ್ದು, ಅದರಲ್ಲಿ ಇಬ್ಬರು ಶವವಾಗಿ ಮತ್ತು ಮತ್ತೊಬ್ಬ ಬಾಲಕಿ ಅಸ್ವಸ್ಥಳಾಗಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಂತ್ರಸ್ತ ಬಾಲಕಿಯರ ಕುಟುಂಬಸ್ಥರು ಒತ್ತಾಯಿಸಿದ್ದು, ಗ್ರಾಮಸ್ಥರು ಕೂಡ ಪ್ರತಿಭಟನೆ ನಡೆಸಿ, ಕುಟುಂಬದವರ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ಇನ್ನು ಈ ಮೂವರು ಸೋದರಿಯರು 13, 16 ಹಾಗೂ 17 ವರ್ಷ ವಯಸ್ಸಿನವರಾಗಿದ್ದು, ಇಬ್ಬರು ಸಹೋದರಿಯರ ಶವಗಳ ಬಳಿಯೇ ಮತ್ತೊಬ್ಬ ಬಾಲಕಿಯು ಅಸ್ವಸ್ಥಳಾಗಿ ಬಿದ್ದಿದ್ದಳು ಎನ್ನಲಾಗಿದೆ.
ಪ್ರತ್ಯಕ್ಷ ಸಾಕ್ಷಿಗಳು ಹೇಳಿರುವ ಪ್ರಕಾರ, ಕುಟುಂಬ ಸದಸ್ಯರು ಬಾಲಕಿಯರನ್ನು ಹುಡುಕಲು ಹೋದಾಗ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯರ ಕೈಗಳನ್ನು ಕಟ್ಟಿಹಾಕಲಾಗಿದ್ದು, ಅವರ ಬಾಯಲ್ಲಿ ನೊರೆ ಬರುತ್ತಿತ್ತು. ಅವರ ಬಾಯಿಗೆ ವಿಷ ಪದಾರ್ಥಗಳನ್ನು ಹಾಕಿರಬಹುದು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡುವಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.