ನವದೆಹಲಿ, ಫೆ.19 (DaijiworldNews/PY): "ಇಂಧನ ಆಮದು ಪ್ರಮಾಣ ಇಳಿಕೆ ಮಾಡುವತ್ತ ಹಿಂದಿನ ಸರ್ಕಾರಗಳು ಗಮನವಹಿಸಿದ್ದರೆ ಮಧ್ಯಮ ವರ್ಗಕ್ಕೆ ಹೊರೆ ಆಗುತ್ತಿರಲಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಆನ್ಲೈನ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, "2019-20ರಲ್ಲಿ ಭಾರತಕ್ಕೆ ಆವಶ್ಯಕೆಯಿದ್ದ ತೈಲದಲ್ಲಿ ಶೇ.85ಕ್ಕಿಂತ ಅಧಿಕ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲಾಯಿತು. ನೈಸರ್ಗಿಕ ಅನಿಲದ ಅವಶ್ಯಕತೆಯ ಶೇ.53ರಷ್ಟನ್ನು ಆಮದು ಮಾಡಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
"ಇಷ್ಟೊಂದು ಪ್ರತಿಭೆ ಹೊಂದಿರುವ ದೇಶಕ್ಕೆ ಇಂಧನದ ಅಗತ್ಯಗಳಿಗೆ ಈ ಪರಿಯಲ್ಲಿ ಆಮದನ್ನು ಅವಲಂಬಿಸಬೇಕೆ?" ಎಂದು ಕೇಳಿದ್ದಾರೆ.
"ಯಾರನ್ನೂ ಕೂಡಾ ನಾನು ಟೀಕೆ ಮಾಡಲು ಇಚ್ಛಿಸುವುದಿಲ್ಲ. ಆದರೆ, ಈ ಬಗ್ಗೆ ಹಿಂದೆಯೇ ನಾವು ಗಮನವಹಿಸುತ್ತಿದ್ದರೆ, ಮಧ್ಯಮ ವರ್ಗದ ಜನರ ಮೇಲೆ ಹೊರೆ ಬೀಳುತ್ತಿರಲಿಲ್ಲ" ಎಂದಿದ್ದಾರೆ.
"ನಮ್ಮ ಸರ್ಕಾರವು ಮಧ್ಯಮ ವರ್ಗದ ಜನರ ಬಗ್ಗೆ ಸಂವೇದನಾಶೀಲವಾಗಿದೆ. ಅಲ್ಲದೇ, ದೇಶವು ಇಂದು ಎಥೆನಾಲ್ ಉಪಯೋಗಕ್ಕೆ ಆದ್ಯತೆ ಕೊಡುತ್ತಿದ್ದು, ರೈತರಿಗೆ ಹಾಗೂ ಗ್ರಾಹಕರಿಗೆ ಇದು ನೆರವಾಗಿದೆ. ದೇಶವು ಇಂಧನದ ಆಮದನ್ನು ಇಳಿಕೆ ಮಾಡಲು ಯತ್ನಿಸುತ್ತಿದೆ" ಎಂದು ಹೇಳಿದ್ದಾರೆ.