ಥಾಣೆ, ಫೆ.19 (DaijiworldNews/MB) : ಕೊರೊನಾ ನಿಯಮ ಉಲ್ಲಂಘನೆ ಮಾಡಿ ಹುಟ್ಟುಹಬ್ಬ ಆಚರಿಸಿದ ಕಾರಣ ಮಹಾರಾಷ್ಟ್ರದ ಡೊಂಬಿವಿಲಿಯ 500 ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಫೆಬ್ರವರಿ 17 ಮತ್ತು 18 ರ ಮಧ್ಯರಾತ್ರಿ ಡೆಸ್ಲಾಪಾಡಾದಲ್ಲಿ ಹುಟ್ಟು ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಲಾಗಿದೆ. ಹಾಗೆಯೇ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಕಾರ್ಯಕ್ರಮ ಆಯೋಜನೆ ಮಾಡಿದವರು ಸೇರಿ ಒಟ್ಟು ಸುಮಾರು 500 ಜನರ ವಿರುದ್ಧ ಮನ್ಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಡೊಂಬಿವಿಲಿ ಮುನಿಸಿಪಲ್ ಕಾರ್ಪೋರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
''ಪೊಲೀಸರು ಅವರ ವಿರುದ್ದ ಎಫ್ಐಆರ್ ದಾಖಲಿಸಿದ್ದು, ಈವರೆಗೂ ಯಾರನ್ನು ಕೂಡಾ ಬಂಧಿಸಿಲ್ಲ'' ಎಂದು ವರದಿಯಾಗಿದೆ.