ನವದೆಹಲಿ, ಫೆ.19 (DaijiworldNews/HR): ವಾಟ್ಸ್ಆಯಪ್ ಸಂವಾದದ ಆಧಾರದಲ್ಲಿ ಏಕಪಕ್ಷೀಯ, ಅಪಮಾನಕರ ಮತ್ತು ವ್ಯಂಗ್ಯದಿಂದ ಕೂಡಿದ ಅರ್ಧಸತ್ಯವನ್ನು ಪ್ರಕಟಿಸುವ ಮೂಲಕ ಕೆಲವು ಮಾಧ್ಯಮ ಸಂಸ್ಥೆಗಳು ತಮ್ಮ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದ್ದು, ಹೆಸರಿಗೆ ಮಸಿ ಬಳಿದು ನ್ಯಾಯಯುತ ತನಿಖೆ ಸಾಧ್ಯವಾಗದಂತೆ ಮಾಡುತ್ತಿವೆ. ಇಂತಹ ವರದಿ ಪ್ರಕಟಿಸುವುದಕ್ಕೆ ತಡೆ ನೀಡಬೇಕು ಎಂದು ದಿಶಾ ರವಿ ಅವರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.

"ತನಿಖಾ ದಾಖಲಾತಿಗಳೊಂದಿಗೆ ತಾವು ನಡೆಸಿದ ವಾಟ್ಸ್ಆಯಪ್ ಚಾಟ್ ಮತ್ತು ಇತರ ಸಂವಹನಗಳನ್ನು ತನಿಖಾ ಸಂಸ್ಥೆಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಕ್ಕೆ ತಡೆ ನೀಡಬೇಕು" ಎಂದು ಕೂಡ ತಮ್ಮ ಅರ್ಜಿಯಲ್ಲಿ ದಿಶಾ ಹೇಳಿದ್ದಾರೆ.
ಇನ್ನು ದಿಶಾ ವಿರುದ್ಧದ ತನಿಖೆಯ ವಿವರಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿಲ್ಲ ಎಂದು ದೆಹಲಿ ಪೊಲೀಸರು ಹೈಕೋರ್ಟ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರ ಪೀಠವು ದೆಹಲಿ ಪೊಲೀಸರ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.