ಪುದುಚೇರಿ, ಫೆ.18 (DaijiworldNews/PY): ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಲಂಗಾಣದ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್ ಅವರು ಹೆಚ್ಚುವರಿ ಜವಾಬ್ದಾರಿ ವಹಿಸಿದ್ದಾರೆ.

ಡಾ. ಕಿರಣ್ ಬೇಡಿ ಅವರನ್ನು ಫೆ.16ರಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ನಂತರ ರಾಷ್ಟ್ರಪತಿ ಭವನವು, ತಮಿಳಿಸೈ ಸೌಂದರರಾಜನ್ ಅವರು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಹೆಚ್ಚುವರಿ ಜವಾಬ್ದಾರಿ ವಹಿಸುವಂತೆ ಸೂಚನೆ ನೀಡಿತ್ತು.
ಗುರುವಾರ ಬೆಳಗ್ಗೆ ಪುದುಚೇರಿಯ ರಾಜ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ತಮಿಳಿಸೈ ಸೌಂದರರಾಜನ್ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಈ ವೇಳೆ ಪುದುಚೇರಿ ಸಿಎಂ ವಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಇದೇ ಮೊದಲ ಬಾರಿಗೆ ಪುದುಚೇರಿಯ ಇತಿಹಾಸದಲ್ಲಿ ತಮಿಳೂ ಭಾಷೆ ಮಾತನಾಡುವ ವ್ಯಕ್ತಿಯೋರ್ವರು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಳ್ಳುತ್ತಿದ್ದು, ಈ ಮುಖಾಂತರ ತಮಿಳಿಸೈ ಸೌಂದರರಾಜನ್ ಅವರು ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಇವರು ತಮಿಳುನಾಡಿನ ಬಿಜೆಪಿ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ.
2016ರಿಂದಲೇ ಕಿರಣ್ ಬೇಡಿ ಅವರು ಲೆಫ್ಟಿನಂಟ್ ಗವರ್ನರ್ ಹುದ್ದೆಯನ್ನು ವಹಿಸಿದ್ದು, ಆದರೆ, ಪುದುಚೇರಿಯ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಆರೋಪ ಹಾಗೂ ಭಾರೀ ಪ್ರತಿಭಟನೆ ಎದುರಾಗಿತ್ತು.