ಬೆಂಗಳೂರು, ಫೆ.14 (DaijiworldNews/MB) : ''ಬಸವಕಲ್ಯಾಣ, ಮಸ್ಕಿ, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿಜೆಡಿಎಸ್ ಅಭ್ಯರ್ಥಿಗಳು ಕೂಡಾ ಸ್ಫರ್ಧಿಸಲಿದ್ದಾರೆ'' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಭಾನುವಾರ ಘೋಷಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ''ಪಕ್ಷಕ್ಕೆ ಆರ್ಥಿಕ ತೊಂದರೆ ಇರುವ ಕಾರಣ ಈ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸುವುದು ಬೇಡ ಎಂದು ನಿರ್ಧರಿಸಲಾಗಿತ್ತು. ಆದರೆ ಈಗ ಮೂರು ಕಡೆ ಅಭ್ಯರ್ಥಿಗಳನ್ನು ಸ್ಪರ್ಧೆಗಳಿಸಲು ತೀರ್ಮಾನಿಸಿದ್ದೇನೆ'' ಎಂದು ಹೇಳಿದ್ದಾರೆ.
''ಚುನಾವಣೆಯಲ್ಲಿ ಸ್ಫರ್ಧಿಸಲ್ಲ ಎಂದು ಹೇಳಿದಾಗ ಹಲವರು ನಾವು ಬಿಜೆಪಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ನಮ್ಮಲ್ಲಿ ಅಂತಹ ಯಾವ ಯೋಚನೆಗಳು ಕೂಡಾ ಇಲ್ಲ. ನಾವು ವಿಧಾನ ಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ, 224 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ'' ಎಂದು ಹೇಳಿದರು.
ಹಾಗೆಯೇ, ''ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳನ್ನು ಪಾರದರ್ಶಕವಾಗಿ ನೇಮಿಸಲಾಗುತ್ತದೆ. ಹಣಕ್ಕಿಂತ ನಿಷ್ಠೆಗೆ ಬೆಲೆ ನೀಡಲಾಗುವುದು'' ಎಂದು ಕೂಡಾ ಇದೇ ವೇಳೆ ಹೇಳಿದರು.