ಬೆಂಗಳೂರು, ಫೆ.12 (DaijiworldNews/PY): ಸಚಿವ ರಮೇಶ್ ಜಾರಕಿಹೊಳಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದು, "ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಅಹಿಂದ ಸಮಾವೇಶ ಮಾಡುತ್ತಿದ್ದೇವೆ ಎಂದ ಘೋಷಣೆ ಮಾಡಲಿ. ಆಗ ಕೈ ನಾಯಕರಿಗೆ ಈ ಬಗ್ಗೆ ತಿಳಿಯುತ್ತದೆ" ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಹಿಂದ ಸಮಾವೇಶವನ್ನು ಸಿದ್ದರಾಮಯ್ಯ ಅವರು ಪಕ್ಷಾತೀತವಾಗಿ ನಡೆಸುತ್ತಿದ್ದು, ಈಗ ಜಾತಿ, ಹಿಂದ ಎನ್ನುವುದು ಯಾವುದೂ ಇಲ್ಲ. ಈಗ ಹಿಂದುತ್ವ ಮಾತ್ರ" ಎಂದು ಹೇಳಿದ್ದಾರೆ.
"ಸಿಎಂ ಅವರಿಗೆ ಜಲಸಂಪನ್ಮೂಲ ಇಲಾಖೆಯು ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಿದೆ. ನಮ್ಮ ಇಲಾಖೆಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡುವ ನಿರೀಕ್ಷೆ ಇದೆ. ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಅನುದಾನ ಹಂಚಿಕೆ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ನೀರಾವರಿಗೆ ಆದ್ಯತೆ ನೀಡಿದಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ" ಎಂದಿದ್ದಾರೆ.
ವಾಲ್ಮೀಕಿ ಸಮುದಾಯದಿಂದ ಮೀಸಲಾತಿಗೆ ಗಡುವು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರರು. ಈ ವಿಚಾರವನ್ನು ಬಿಎಸ್ವೈ ಅವರು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಸ್ವಾಮೀಜಿಗಳು ಗಡುವು ನೀಡಿರಬಹುದು. ಸಿಎಂ ಬಿಎಸ್ವೈ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ" ಎಂದು ತಿಳಿಸಿದ್ದಾರೆ.
"ನನ್ನ ಪುತ್ರ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಲ್ಲ" ಎಂದಿದ್ದಾರೆ.
ಟಿಕೆಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಮ್ಮ ಅಭಿಪ್ರಾಯಗಳ ಬಗ್ಗೆ ಸಿಎಂ ಹಾಗೂ ವರಿಷ್ಠರಿಗೆ ತಿಳಿಸಿದ್ದೇವೆ. ನಾವು ವರಿಷ್ಠರು ತೆಗೆದಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ" ಎಂದು ತಿಳಿಸಿದ್ದಾರೆ.