ನವದೆಹಲಿ, ಫೆ.11 (DaijiworldNews/PY): "ಕೇಂದ್ರ ಸರ್ಕಾರವು, ಗಡಿ ಕಾಯುವ ಯೋಧರ ಬಲಿದಾನವನ್ನು ಅವಮಾನಿಸಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಭಾರತ ಹಾಗೂ ಚೀನಾ ಗಡಿಯಲ್ಲಿ ಯಥಾಪೂರ್ವ ಸ್ಥಿತಿಯನ್ನು ಮರುಸ್ಥಾಪಿಸದೇ ಇದ್ದಲ್ಲಿ, ಶಾಂತಿ ಹಾಗೂ ನೆಮ್ಮದಿ ಇರುವುದಿಲ್ಲ" ಎಂದಿದ್ದಾರೆ.
"ಕೇಂದ್ರ ಸರ್ಕಾರ ನಮ್ಮ ಯೋಧರ ತ್ಯಾಗವನ್ನು ಏಕೆ ಅವಮಾನಿಸುತ್ತಿದೆ. ನಮ್ಮ ಪ್ರದೇಶವನ್ನು ಏಕೆ ಚೀನಾಕ್ಕೆ ಬಿಟ್ಟುಕೊಡುತ್ತಿದೆ" ಎಂದು ಕೇಳಿದ್ದಾರೆ.
ಇದಕ್ಕೂ ಮುನ್ನ ರಾಜ್ಯ ಸಭೆಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, "ಭಾರತ ಹಾಗೂ ಚೀನಾ, ಪ್ಯಾಂಗೊಗ್ ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯಲ್ಲಿ ನಿಯೋಜನೆ ಮಾಡಲಾಗಿರುವ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ" ಎಂದು ಹೇಳಿದ್ದರು.