ಕೋಲಾರ, ಫೆ.05 (DaijiworldNews/HR): "ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 2020ರ ಅಂತ್ಯಕ್ಕೆ 7,721.65 ಕೋಟಿ ಸಂಚಿತ ವೆಚ್ಚವಾಗಿದ್ದು, 2023ರ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸಲು ಯೋಜಿಸಲಾಗಿದೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನ ಪರಿಷತ್ನಲ್ಲಿ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಮತ್ತಿತರ ಅಂಶಗಳ ಕುರಿತು ಕೇಳಲಾದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರ ಅನುಪಸ್ಥಿತಿಯಲ್ಲಿ ಸಚಿವ ಬೊಮ್ಮಾಯಿ ಉತ್ತರಿಸಿ, "ಈ ಯೋಜನೆಯಿಂದ ರಾಜ್ಯದ ಪೂರ್ವಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯ 29 ತಾಲ್ಲೂಕಿನ 6,657 ಗ್ರಾಮಗಳಿಗೆ ಹಾಗೂ 68.35 ಲಕ್ಷ ಜನರಿಗೆ ಪ್ರಯೋಜನವಾಗಲಿದ್ದು, 527 ಕೆರೆಗಳಿಗೆ ಅದರ ಸಾಮರ್ಥ್ಯದ ಶೇಕಡ 50ರಷ್ಟು ನೀರು ತುಂಬಿಸಿ ಅಂತರ್ಜಲ ವೃದ್ಧಿಗೆ ನೀರೊದಗಿಸಲು ಅವಕಾಶವಿದೆ" ಎಂದರು.
ಇನ್ನು "ಕುಡಿಯುವ ನೀರಿಗಾಗಿ 15.029 ಟಿಎಂಸಿ ಅಡಿ ನೀರು, ಕೆರೆಗಳನ್ನು ತುಂಬಿಸಲು 8.967 ಟಿಎಂಸಿ ಅಡಿ ನೀರು ಸೇರಿ ಒಟ್ಟು 24.01 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ" ಎಂದು ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆ ವಿಳಂಬದ ಕುರಿತು ಡಾ.ವೈ.ಎ.ಎನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ರೈತರು, ನಿಗಮ ಮತ್ತು ಗುತ್ತಿಗೆದಾರರು ನಡುವೆ ತ್ರಿಪಕ್ಷೀಯ ಕರಾರು ಒಪ್ಪಂದ ಮಾಡಿಕೊಂಡು ರೈತರ ಸಹಮತ ಪಡೆದು ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದ್ದು, ಭೂಸ್ವಾಧೀನ ಕಾಯ್ದೆ ಅನ್ವಯ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಸದನಕ್ಕೆ ತಿಳಿಸಿದ್ದಾರೆ.