ಮೈಸೂರು,ಫೆ.02 (DaijiworldNews/HR): "ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ರಾಜ್ಯದ ಜನರ ಭಿಕ್ಷೆಯಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ, ಆದರೆ ಬಜೆಟ್ನಲ್ಲಿ ರಾಜ್ಯವನ್ನೇ ನಿರ್ಲಕ್ಷಿಸಿದ್ದಾರೆ" ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, "ತಮಿಳುನಾಡಿನವರಾದ ನಿರ್ಮಲ ಸೀತಾರಾಮನ್ ತಮ್ಮ ತವರು ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಕಾರಣ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಟ್ಟಿದ್ದಾರೆ. ಆದರೆ ಕರ್ನಾಟಕದ ಪ್ರತಿನಿಧಿಯಾಗಿದ್ದರೂ ರಾಜ್ಯಕ್ಕೆ ಕೇವಲ 14,788 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಆತ್ಮನಿರ್ಭರ್ ಅಲ್ಲ ಇದು ಆತ್ಮ ಬರ್ಬಾದ್ ಬಜೆಟ್" ಎಂದರು.
ಇನ್ನು "2020-21ರಲ್ಲಿ ಶೇ 9.5 ಮತ್ತು 2022ರಲ್ಲಿ ಶೇ 6.8 ಹಣದ ಕೊರತೆ ಇರುವುದಾಗಿ ಕೇಂದ್ರ ಸರ್ಕಾರವೇ ಹೇಳಿಕೊಂಡಿದ್ದು, ಈ ಕೊರತೆ ನೀಗಿಸಿಕೊಳ್ಳಲು ಮತ್ತಷ್ಟು ಸಾಲ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ನಲ್ಲಿ ಜನರು ಇಟ್ಟಿರುವ ಠೇವಣಿಗೂ ಕೈ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು" ಎಂದು ಹೇಳಿದ್ದಾರೆ.