ನವದೆಹಲಿ, ಫೆ.02 (DaijiworldNews/PY): ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಐಇಡಿ ಸ್ಪೋಟಗೊಂಡ ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಂತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಕಳೆದ ಶುಕ್ರವಾರ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಿಂದ ಕೇವಲ 50 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಕೆಲವು ಕಾರುಗಳಿಗೆ ಹಾನಿಯಾಗಿತ್ತು.
ಈ ಬಗ್ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆ ಮಾತನಾಡಿ ಘಟನೆಯನ್ನು ಖಂಡಿಸಿರುವುದಾಗಿ ತಿಳಿಸಿದ್ದಾರೆ. ಘಟನೆಗೆ ಕಾರಣೀಕರ್ತರಾದವರನ್ನು ಪತ್ತೆಹಚ್ಚಿ, ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಘಟನೆಯ ಸಂಬಂಧ ನಡೆಯುತ್ತಿರುವ ತನಿಖೆಯ ವಿಚಾರವಾಗಿ ಉಭಯ ದೇಶಗಳ ಪ್ರಧಾನಿಗಳು ಕೂಡಾ ತೃಪ್ತಿ ವ್ಯಕ್ತಪಡಿಸಿದ್ದಾರೆ.