ಬೆಂಗಳೂರು, ಫೆ.02 (DaijiworldNews/MB) : 2021-2022 ಸಾಲಿನ ಕೇಂದ್ರ ಬಜೆಟ್ನಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಯಾವುದೇ ಪ್ರಮುಖ ಘೋಷಣೆ ಮಾಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಮಾನಯಾನ ಸಂಸ್ಥೆಗಳು, ''ಕೊರೊನಾ ಸೋಂಕು ವಿಮಾನಯಾನ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ನಾವು ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರದ ಬಜೆಟ್ನಲ್ಲಿ ಕೆಲವು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಸರ್ಕಾರ ನಿರೀಕ್ಷೆಯನ್ನು ಹುಸಿಗೊಳಿಸಿದೆ'' ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮೊದಲ ಏವಿಯೇಷನ್ ಡಾಟಾ ಕನ್ಸಲ್ಟಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ತೋಮರ್, ''ಟರ್ಬೈನ್ ಇಂಧನವನ್ನು ಜಿಎಸ್ಟಿ ಅಡಿಯಲ್ಲಿ ತರುವಂತೆ ಹಾಗೂ ಅಬಕಾರಿ ಸುಂಕವನ್ನು ಕಡಿತಗೊಳಿಸುವುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಅದಾವುದನ್ನೂ ಮಾಡಲಾಗಿಲ್ಲ. ಕೊರೊನಾದಿಂದಾಗಿ ಹೊಟೇಲ್ ಉದ್ಯಮದ ಬಳಿಕ ಸಾಕಷ್ಟು ನಷ್ಟಕ್ಕೆ ಒಳಗಾದ ವಲಯ ನಮ್ಮದು. ಆದರೆ ಈ ಬಜೆಟ್ನಲ್ಲಿ ಯಾವುದೇ ಪ್ರಮುಖ ಘೋಷಣೆಗಳು ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಭಾರತೀಯ ವಿಮಾನಯಾನ ಉದ್ಯಮದಲ್ಲಿ ಶೇ.90ರಷ್ಟು ವಿಮಾನಗಳನ್ನು ವಿದೇಶಿ ಕಂಪನಿಗಳಿಂದ ಗುತ್ತಿಗೆ ಪಡೆಯುತ್ತದೆ. ಡಾಲರ್ ಮೂಲಕವೇ ವಿದೇಶಿ ಕಂಪನಿಗಳಿಗೆ ಹಣ ಪಾವತಿ ಮಾಡಬೇಕು. ಬಾಡಿಗೆ ಹಣದ ಮೇಲಿನ ತೆರಿಗೆ ವಿನಾಯಿತಿ ಇಡೀ ವಿಮಾನಯಾನ ಉದ್ಯಮಕ್ಕೆ ಸಹಾಯ ಮಾಡುವುದಿಲ್ಲ. ಕೇಂದ್ರ ಸರ್ಕಾರ ಈ ಘೋಷಣೆ ಇಂಡಿಗೋ ಅಥವಾ ಸ್ಪೈಸ್ ಜೆಟ್ ಗಳಿಗೆ ಲಾಭ ನೀಡಬಹುದಷ್ಟೇ'' ಎಂದು ವಿಮಾನಯಾನ ಕ್ಷೇತ್ರದ ತಜ್ಞ ಕ್ಯಾಪ್ಟೆನ್ ಮೋಹನ್ ರಂಗನಾಥ್ ಅವರು ಹೇಳಿದ್ದಾರೆ.