ನವದೆಹಲಿ, ಫೆ.02 (DaijiworldNews/MB) : ಕೊರೊನಾ ಸೋಂಕು ಪ್ರಸರಣವು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕೊರೊನಾ ನಿಯಂತ್ರಣದ ಬಗ್ಗೆ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗೆ ನೆರವು–ಮಾರ್ಗದರ್ಶನ ನೀಡಲು ಈ ರಾಜ್ಯಗಳಿಗೆ ತಜ್ಞರನ್ನು ಒಳಗೊಂಡ ತಂಡಗಳನ್ನು ಕಳುಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ.

ದೇಶದ ಹಲವು ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದರೂ ಕೂಡಾ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮಾತ್ರ ಪ್ರಕರಣಗಳ ಸಂಖ್ಯೆ ಅಧಿಕವಾಗಿ ವರದಿಯಾಗುತ್ತಿದೆ. ದೇಶದಲ್ಲಿ ಕಂಡು ಬರುತ್ತಿರುವ ಕೊರೊನಾ ಪ್ರಕರಣಗಳ ಪೈಕಿ ಶೇ. 70ರಷ್ಟು ಈ ಎರಡು ರಾಜ್ಯಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗೆ ನೆರವು–ಮಾರ್ಗದರ್ಶನ ನೀಡಲು ಈ ರಾಜ್ಯಗಳಿಗೆ ತಜ್ಞರನ್ನು ಒಳಗೊಂಡ ತಂಡ ಕಳುಹಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ನವದೆಹಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜ್ನ ವೈದ್ಯರು, ಆರೋಗ್ಯ ಸಚಿವಾಲಯದ ಅಧಿಕಾರಿಗಳು ಕೇರಳಕ್ಕೆ ತೆರಳುವ ತಂಡದಲ್ಲಿರಲಿದ್ದು, ತಿರುವನಂತಪುರದಲ್ಲಿರುವ ಆರೋಗ್ಯ ಸಚಿವಾಲಯದ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಕೂಡಾ ನೆರವಾಗುತ್ತಾರೆ ಎಂದು ಹೇಳಿದೆ.