ನವದೆಹಲಿ, ಫೆ.02 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಫೆ.4ರಂದು ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಹೋರಾಟ 'ಚೌರಿ ಚೌರಾ'ದ 100ನೇ ವರ್ಷಾಚರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಉದ್ಘಾಟನಾ ಸಮಾರಂಭದ ವೇಳೆ, ಈ ಹೋರಾಟದ ಸ್ಮರಣೆಗಾಗಿ ಹೊರತಂದಿರುವ ಅಂಚೆ ಚೀಟಿಗಳನ್ನು ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
'ಚೌರಿ ಚೌರಾ' ಹೋರಾಟದ 100ನೇ ವರ್ಷ ವರ್ಷಾಚರಣೆಯ ಅಂಗವಾಗಿ ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ಯುಪಿ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಮುಂದಿನ ವರ್ಷ ಫೆ.4ರವರೆಗೆ ಈ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
1922ರ ಫೆ.5ರಂದು 'ಚೌರಿ ಚೌರಾ' ಘಟನೆಯು ಉತ್ತರಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ನಡೆಯಿತು. ಪ್ರತಿಭಟನಾಕಾರರ ದೊಡ್ಡ ಗುಂಪೊಂದು ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದರು. ಈ ಸಂದರ್ಭ ಕೆಲ ಮಂದಿ ಹೋರಾಟಗಾರರು ಸಾವನ್ನಪ್ಪುತ್ತಾರೆ. ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಚೌರಿ ಚೌರಾ ಪೊಲೀಸ್ ಠಾಣೆಗೆ ದಾಳಿ ಮಾಡಿ ಬೆಂಕಿ ಹಚ್ಚುತ್ತಾರೆ. ಈ ಘಟನೆಯಲ್ಲಿ ಠಾಣೆಯಲ್ಲಿದ್ದ ಹಲವಾರು ಮಂದಿ ಸಾವನ್ನಪ್ಪಿದ್ದರು.