ನವದೆಹಲಿ, ಫೆ.02 (DaijiworldNews/MB) : ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ರೈತರು ರೈಲಿನಲ್ಲಿ ಆಗಮಿಸುತ್ತಿದ್ದ ವೇಳೆ ರೈಲ್ವೆ ಅಧಿಕಾರಿಗಳು ರೈಲನ್ನೇ ಬೇರೆಡೆಗೆ ತಿರುಗಿಸಿದ್ದಾರೆ. ಹಾಗೆಯೇ ರೈಲು ಸಂಚಾರವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಉಗ್ರಾನ್) ಹಾಗೂ ಭಾರತೀಯ ಕಿಸಾನ್ ಯೂನಿಯನ್ (ದಕೌಂಡಾ) ಸೇರಿದಂತೆ ಹಲವು ರೈತ ಸಂಘಟನೆಗಳು ಆರೋಪ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಕೆಯು(ಉಗ್ರಾನ್)ನಾಯಕ ಸುಖದೇವ್ ಸಿಂಗ್ ಕೊಕ್ರಿಕಾಲನ್, ''ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ಹೋಗಲು ಪಂಜಾಬ್ ನ ಬಥಿಂಡ, ಮಾನ್ಸಾ ಹಾಗೂ ಫಿರೋಝ್ ಪುರದ ರೈತರು ರೈಲಿನಲ್ಲಿ ಹೊರಟ್ಟಿದ್ದು ರೈಲ್ವೆ ಅಧಿಕಾರಿಗಳು ರೈಲನ್ನೂ ಬೇರೆಡೆಗೆ ತಿರುಗಿಸಿದ್ದಾರೆ'' ಎಂದು ಆರೋಪಿಸಿದ್ದಾರೆ.
''ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಹೀಗೆ ಮಾಡಿ ರೈತರು ದೆಹಲಿಗೆ ತಲುಪುವುದನ್ನು ತಡೆಯಬಹುದೆಂಬ ಕಲ್ಪನೆ ಬೇಡ. ರೈತರು ಟ್ರ್ಯಾಕ್ಟರ್ ಟ್ರೋಲಿಗಳು, ಬಸ್, ಟೆಂಪೊ ಟ್ರಾವಲರ್ ಮೂಲಕ ದೆಹಲಿಗೆ ಬರುತ್ತಿದ್ದಾರೆ'' ಎಂದು ಹೇಳಿದ್ದಾರೆ.