ನವದೆಹಲಿ,ಫೆ.02 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿರುವ ಸಮೀಪವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ನಿಷೇಧ ಮತ್ತು ಅಧಿಕಾರಿಗಳು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರೈತ ಸಂಘಗಳು, ದೇಶಾದ್ಯಂತ 'ಚಕ್ಕಾ ಜಾಮ್' (ರಸ್ತೆ ಬಂದ್) ಘೋಷಿಸಿವೆ.

ಈ ಕುರಿತು ಮಾತನಾಡಿದ ರೈತ ಸಂಘದ ಮುಖಂಡರು, "ಇಂಟರ್ನೆಟ್ ನಿಷೇಧವನ್ನು ವಿರೋಧಿಸಿ ಫೆಬ್ರುವರಿ 6 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡಲಾಗುವುದು" ಎಂದರು.
ಇನ್ನು "ಕೇಂದ್ರ ಬಜೆಟ್ ಅಲ್ಲಿ ರೈತರನ್ನು ನಿರ್ಲಕ್ಷಿಸಲಾಗಿದ್ದು, ನೀರು, ವಿದ್ಯುತ್ ಸರಬರಾಜನ್ನು ಮೊಟಕುಗೊಳಿಸಲಾಗಿದೆ ಹಾಗೂ ಪ್ರತಿಭಟನಾ ಸ್ಥಳಗಳಲ್ಲಿ ಮೊಬೈಲ್ ಟಾಯ್ಲೆಟ್ ಬ್ಲಾಕ್ಗಳನ್ನು ತೆಗೆದುಹಾಕಲಾಗಿದೆ" ಎಂದು ದೂರಿದ್ದಾರೆ.
"ಫೆಬ್ರವರಿ 6 ರಂದು ನಡೆಯುವ ಚಕ್ಕಾ ಜಾಮ್ ಯಾವ ರೀತಿ ನಡೆಸಬೇಕೆಂಬುದನ್ನು ವಿವಿಧ ಒಕ್ಕೂಟಗಳೊಂದಿಗೆ ಚರ್ಚಿಸಿದ ಬಳಿಕ ಸರ್ವಾನುಮತದಿಂದ ನಿರ್ಧರಿಸಲಾಗುವುದು" ಎಂದು ಪಂಜಾಬ್ನ ರೈತ ಮುಖಂಡ ಮತ್ತು ಎಸ್ಕೆಎಂನ ಭಾಗವಾದ ಬಲ್ಬೀರ್ ಸಿಂಗ್ ರಾಜೇವಾಲ್ ತಿಳಿಸಿದ್ದಾರೆ.