ಮಹಾರಾಷ್ಟ್ರ, ಫೆ.02 (DaijiworldNews/PY): "ಮಹಾರಾಷ್ಟ್ರದ ಯವತ್ನಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ 12 ಮಕ್ಕಳಿಗೆ ಪೋಲಿಯೋ ಲಸಿಕೆಯ ಹನಿಗಳ ಬದಲಾಗಿ ಹ್ಯಾಂಡ್ ಸ್ಯಾನಿಟೈಸರ್ ಹನಿಗಳನ್ನು ಹಾಕಲಾಗಿದೆ" ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
"ಸದ್ಯ ಎಲ್ಲಾ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳ ಆರೋಗ್ಯ ಸ್ಥಿರವಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
"ರವಿವಾರದಂದು ಕಪ್ಸಿಕೊಪ್ರಿ ಗ್ರಾಮದ ಭನ್ಬೋರಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 1-5 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭ ಈ ಘಟನೆ ನಡೆದಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
"ಐದು ವರ್ಷಕ್ಕಿಂತ ಕೆಳಗಿನ 12 ಮಕ್ಕಳಿಗೆ ಪೋಲಿಯೋದ ಹನಿಗಳ ಬದಲಾಗಿ ಎರಡು ಹನಿ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗಿದ್ದು, 12 ಮಕ್ಕಳ ಪೈಕಿ ಒಂದು ಮಗುವಿಗೆ ವಾಂತಿಯಾಗಿದೆ" ಎಂದು ಯವತ್ಮಾಲ್ ಜಿಲ್ಲಾ ಪರಿಷತ್ ಸಿಇಒ ಶ್ರೀಕೃಷ್ಣ ಪಂಚಲ್ ಹೇಳಿದ್ದಾರೆ.
"ನಂತರ 12 ಮಕ್ಕಳಿಗೂ ಕೂಡಾ ಪೋಲಿಯೋ ಹನಿಗಳನ್ನು ನೀಡಲಾಗಿದ್ದು, ಯವತ್ಮಾಲ್ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಲಾಗಿದೆ" ಎಂದಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, "ಮಕ್ಕಳಿಗೆ ಪೋಲಿಯೋ ಹನಿಗಳ ಬದಲಾಗಿ ಸ್ಯಾನಿಟೈಸರ್ ಹನಿಗಳನ್ನು ನೀಡಿದ್ದ ಸಂದರ್ಭ ಸ್ಥಳದಲ್ಲಿ ಮೂವರು ಆರೋಗ್ಯ ಕಾರ್ಯಕರ್ತರು, ವೈದ್ಯರು, ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಮೂವರು ಕಾರ್ಯಕರ್ತರನ್ನು ಅಮಾನತು ಮಾಡಲು ಆದೇಶ ಹೊರಡಿಸಲಾಗುವುದು" ಎಂದು ಪಂಚಲ್ ತಿಳಿಸಿದ್ದಾರೆ.
ಏತನ್ಮಧ್ಯೆ, "ಹಳ್ಳಿಯ ಸರಪಂಚ್ ಓರ್ವರು ಹನಿಗಳನ್ನು ಪರಿಶೀಲಿಸಿದ ಸಂದರ್ಭ ಅವು ಪೋಲಿಯೋ ಹನಿಗಳಲ್ಲ ಹ್ಯಾಂಡ್ ಸ್ಯಾನಿಟೈಸರ್ ಎಂದು ತಿಳಿದುಬಂದಿದೆ. ಈ ಬಗ್ಗೆ ಆ ಪ್ರದೇಶದ ಪೋಷಕರು ಆತಂಕಗೊಂಡಿದ್ದು, ಈ ಘಟನೆಗೆ ಕಾರಣರಾದವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ" ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.