ನವದೆಹಲಿ, ಫೆ.02 (DaijiworldNews/PY): ಕೆಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತಸಂಘಟನೆಗಳು, ಧ್ವನಿವರ್ಧಕಗಳ ಮುಖೇನ ದೆಹಲಿ ಪೊಲೀಸರು ದೇಶಭಕ್ತಿ ಗೀತೆಗಳನ್ನು ಪ್ರಸಾರ ಮಾಡುವುದಕ್ಕೆ ಆಕ್ಷೇಪಿಸಿವೆ ಎಂದು ವರದಿಯಾಗಿದೆ.

ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ಪತ್ರಿಕಾ ಹೇಳಿಕೆಯ ಪ್ರಕಾರ, "ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆಗೂ ಮೊದಲು ಸಿಂಘು ಗಡಿಯಲ್ಲಿ ದೆಹಲಿ ಪೊಲೀಸರು ಬಳಸುತ್ತಿರುವ ಧ್ವನಿವರ್ಧಕಗಳನ್ನು ಬಂದ್ ಮಾಡಬೇಕು" ಎಂದಿವೆ.
ಈ ಬಗೆಗಿನ ವಿಡಿಯೋವೊಂದು ವೈರಲ್ ಆಗಿದ್ದು, ಬಾಲಿವುಡ್ ಬಾರ್ಡರ್ ಸಿನಿಮಾದ 'ಸಂದೇಶ್ ಆತೇ ಹೆ' ಎನ್ನುವ ಹಾಡನ್ನು ಧ್ವನಿವರ್ಧಕದ ಮುಖೇನ ಪ್ರಸಾರ ಮಾಡಲಾಗುತ್ತಿದೆ. ಈ ಸ್ಥಳದಲ್ಲಿ ಹೆಚ್ಚು ಭದ್ರತೆಯನ್ನು ನಿಯೋಜನೆ ಮಾಡಿರುವುದು ಕೂಡಾ ಕಂಡುಬರುತ್ತಿದೆ.
ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಬಳಿಕ ಬಂಧಿತರಾದವರನ್ನು ಬಿಡುಗಡೆ ಮಾಡಬೇಕು ಎಂದೂ ರೈತ ಸಂಘಟನೆಗಳು ಆಗ್ರಹಿಸಿವೆ. ಪ್ರತಿಭಟನಾ ಸ್ಥಳದಲ್ಲಿ ನೀರು ಸೇರಿದಂತೆ ಇಂಟರ್ನೆಟ್ ಹಾಗೂ ಶೌಚಾಲಾಯ ವ್ಯವಸ್ಥೆಯನ್ನು ನೀಡಬೇಕೆಂದು ಬೇಡಿಕೆ ಮುಂದಿಟ್ಟಿವೆ.
ಜ.26ರ ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ನಂತರ ಭದ್ರತೆ ಸಲುವಾಗಿ ಸಿಂಘು ಗಡಿಯಲ್ಲಿ ಹೆಚ್ಚು ಪೊಲೀಸರನ್ನು ಹಾಗೂ ಭದ್ರತಾಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.