ನವದೆಹಲಿ, ಫೆ.02 (DaijiworldNews/MB) : ಸೋಮವಾರ ಮಂಡಿಸಿದ ಬಜೆಟ್ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿ ಸೆಸ್ನ್ನು ಕೇಂದ್ರ ಸರ್ಕಾರ ಹೇರಿದ್ದು ಈ ಹಿನ್ನೆಲೆ ಇಂಧನ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಳ್ಳಿಹಾಕಿದ್ದಾರೆ. ''ಮೋದಿ ಸರ್ಕಾರದ ಬಜೆಟ್ ದೇಶವನ್ನು ಮುಂದೆ ಕೊಂಡೊಯ್ಯಲಿದೆ'' ಎಂದು ಅವರು ಹೇಳಿದ್ದಾರೆ.

"ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ. ಜನರ ಮೇಲೆ ಹೆಚ್ಚುವರಿ ಹೊರೆ ಇರುವುದಿಲ್ಲ. ತೆರಿಗೆಗಳನ್ನು ಮರು ರೂಪಿಸಲು ಸೆಸ್ ವಿಧಿಸಲಾಗಿದೆ. ಸರ್ಕಾರವು ಅಬಕಾರಿ ಕಡಿಮೆ ಮಾಡಿದೆ ಮತ್ತು ಹೊಸ ಕೃಷಿ ಸೆಸ್ ಅನ್ನು ಪ್ರಾರಂಭಿಸಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿ ಸೆಸ್ (ಎಐಡಿಸಿ) ಅನ್ನು ವಿಧಿಸುವ ಪ್ರಸ್ತಾವವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಸಂದರ್ಭ ಮುಂದಿಟ್ಟಿದ್ದು, ಪೆಟ್ರೋಲ್ ಮೇಲೆ ಲೀಟರ್ ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ. ಕೃಷಿ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಫೆಬ್ರವರಿ 2ರಿಂದಲೇ ಅನ್ವಯವಾಗಲಿದೆ.