ಮುಂಬೈ, ಫೆ.02 (DaijiworldNews/MB) : ''2021-22 ನೇ ಸಾಲಿನ ಬಜೆಟ್ನಲ್ಲಿ ಮನರಂಜನಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ'' ಎಂದು ಚಿತ್ರೋದ್ಯಮದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದಿ ಚಲನಚಿತ್ರ ಪ್ರದರ್ಶಕ ಅಕ್ಷಯ್ ರತಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ, ''ಮನರಂಜನಾ ಕ್ಷೇತ್ರದ ಬಗ್ಗೆ ಯಾವುದೇ ಉಲ್ಲೇಖವನ್ನು ಬಜೆಟ್ನಲ್ಲಿ ಮಾಡದಿರುವುದು ದುರದೃಷ್ಟಕರ. ನಮಗೆಲ್ಲರಿಗೂ ಹೆಚ್ಚುವರಿ ಹೊರೆ ಯಾವುದು ಇಲ್ಲ ಎಂಬುದಷ್ಟೇ ಸಮಾಧಾನ ಬಿಟ್ಟರೆ, ಈ ಬಜೆಟ್ನಲ್ಲಿ ನಮ್ಮ ಕ್ಷೇತ್ರವನ್ನೇ ಕಡೆಗಣಿಸಲಾಗಿದೆ. ಕೊರೊನಾ ಸಂದರ್ಭ ಅಧಿಕ ಸಂಕಷ್ಟಕ್ಕೆ ಸಿಲುಕಿದ್ದು ಚಿತ್ರರಂಗ. ಈ ಬಗ್ಗೆ ಗಮನಿಸುವುದು ಅತೀ ಮುಖ್ಯ'' ಎಂದು ಹೇಳಿದ್ದಾರೆ.
ನಿರ್ಮಾಪಕ ಟಿಪಿ ಅಗರ್ವಾಲ್, ''ನಮಗೆ ಸರ್ಕಾರದ ಮೇಲೆ ಅಧಿಕ ನಿರೀಕ್ಷೆ ಏನೂ ಇರಲಿಲ್ಲ. ನಮಗೆ ಯಾವುದೇ ಸಾಲ ಸಿಗಲ್ಲ. ಸಾಲ ಬೇಕಾದರೂ ನಾವು ಆಸ್ತಿ ಅಡವಿಡಬೇಕು. ನಾವು ನಿರ್ಮಾಣ ಮಾಡುವ ಸಿನಿಮಾವನ್ನು ಅಡಮಾನವಿಡಲು ಆಗಲ್ಲ. ನಾವು ಜಿಎಸ್ಟಿ, ತೆರಿಗೆಯಲ್ಲಿ ಕೊಂಚ ಕಡಿತ ನಿರೀಕ್ಷೆ ಮಾಡುತ್ತಿದ್ದೇವೆ'' ಎಂದು ಹೇಳಿದ್ದಾರೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ''ಈ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ'' ಎಂದಿದ್ದಾರೆ.