ಹೈದರಾಬಾದ್, ಜ.28 (DaijiworldNews/MB) : ''ನಾನು ಶಿವನ ಅವತಾರ, ಕೊರೊನಾ ನನ್ನಿಂದ ಹರಡಿದೆ'' ಎಂದು ಮೂಢನಂಬಿಕೆಗೆ ಬಲಿ ಬಿದ್ದು ಹೆತ್ತ ಮಕ್ಕಳನ್ನೇ ಹೊಡೆದು ಕೊಂದ ಮಹಿಳೆ ಮದನಪಲ್ಲಿಯ ಪದ್ಮಜಾ ಪೊಲೀಸ್ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ದಂಪತಿಗಳು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಡಂಬ್ಬೆಲ್ ಎಂದು ಶಂಕಿಸಲಾಗಿರುವ ಆಯುಧದಿಂದ ಹೊಡೆದು ಸಾಯಿಸಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೆ ಎಂಬಲ್ಲಿನ ಶಿವನಗರ್ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ. ದಂಪತಿ ಮೂಢನಂಬಿಕೆಗೆ ಬಲಿ ಬಿದ್ದು ತಮ್ಮ ಮಕ್ಕಳನ್ನೇ ಹೊಡೆದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ.
ದಂಪತಿಗಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಈ ಕೃತ್ಯ ಎಸಗಿದ್ದಾರೆ. ಕಲಿಯುಗವು ಇಂದು ರಾತ್ರಿ ಕೊನೆಗೊಳ್ಳಲಿದ್ದು, ಸತ್ಯಯುಗದ ಆರಂಭದಲ್ಲಿ ನಾಳೆ ನಮ್ಮ ಮಕ್ಕಳು ಪುನರ್ಜನ್ಮ ಪಡೆಯಲಿದ್ದಾರೆ. ಆದ್ದರಿಂದ ನಮ್ಮ ಹೆಣ್ಣುಮಕ್ಕಳನ್ನು ಬಲಿ ನೀಡುವಂತೆ ದೈವಿಕ ಸಂದೇಶ ಬಂದಿರುವುದಾಗಿ ಹೇಳಿಕೊಂಡು ಈ ದಂಪತಿ ಅಲೈಕ್ಯ (27) ಹಾಗೂ ಸಾಯಿ ದಿವ್ಯಾ (22) ಎಂಬ ತಮ್ಮ ಇಬ್ಬರು ಮಕ್ಕಳನ್ನು ಹತ್ಯೆಗೈದಿದ್ದರು.
''ಈ ಮಹಿಳೆಯು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ'' ಎಂದು ಪೊಲೀಸರು ತಿಳಿಸಿದ್ದಾರೆ. ''ಕುಟುಂಬ ಸದಸ್ಯರು ಕೊರೊನಾ ಕಾರಣದಿಂದಾಗಿ ಹೆಚ್ಚಾಗಿ ಮನೆಯಲ್ಲೇ ಇರಬೇಕಾದ ಬಳಿಕ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾರೆ'' ಎಂದು ಕೂಡಾ ಪೊಲೀಸರು ಹೇಳಿದ್ದಾರೆ.
ಕೊರೊನಾ ಪರೀಕ್ಷೆ ನಡೆಸಲು ಮುಂದಾದ ಸಂದರ್ಭ ನಿರಾಕರಿಸಿದ ಮಹಿಳೆ ಪದ್ಮಜಾ, ''ಹಾಲಾಹಲ ನನ್ನ ಗಂಟಲಲ್ಲಿ ಇದ್ದು ನನ್ನ ಪರೀಕ್ಷೆ ಮಾಡುವುದು ಬೇಡ. ನನ್ನ ಪರೀಕ್ಷೆ ಮಾಡಿ ನನ್ನನ್ನು ಅವಮಾನ ಮಾಡಬೇಡಿ. ಹಾಗೇನಾದರೂ ನೀವು ನನ್ನ ಪರೀಕ್ಷೆ ಮಾಡಿದರೆ ನನ್ನ ಶಾಪಕ್ಕೆ ಒಳಗಾಗುತ್ತೀರಿ'' ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ, ''ಕೊರೊನಾ ಪಿಡುಗು ಮಾರ್ಚ್ನಲ್ಲಿ ಕೊನೆಯಾಗುತ್ತದೆ. ಇದಕ್ಕೆ ಯಾವುದೇ ಲಸಿಕೆ ಬೇಡ. ಎಲ್ಲಾ ಔಷಧಿ ತಯಾರಕ ಕಂಪನಿಗಳನ್ನು ಮುಚ್ಚಬೇಕಾಗುತ್ತದೆ'' ಎಂದು ಕೂಡಾ ಪದ್ಮಜಾ ಹೇಳಿದ್ದು ಮಹಿಳೆಯ ಪತಿ ಪುರುಷೋತ್ತಮ ಮಹಿಳೆಯನ್ನು ನಿಯಂತ್ರಿಸಲು ಮುಂದಾದ ಸಂದರ್ಭ, ''ನನ್ನನ್ನು ನಿಯಂತ್ರಿಸಲು ನೀನು ಪ್ರಯತ್ನಿಸುವುದು ಬೇಡ. ಈಗ ನೀನು ನನ್ನ ಪತಿಯಲ್ಲ'' ಎಂದು ಕಿರುಚಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.