ನವದೆಹಲಿ, ಜ.22 (DaijiworldNews/PY): "ಕೊರೊನಾ ಲಸಿಕೆ ಸುರಕ್ಷಿತ ಅಲ್ಲ ಎಂದು ಕೆಲ ಮಂದಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಇದರಿಂದ ಆತಂಕಗೊಂಡಿರುವ ಜನರು ಕೊರೊನಾ ಲಸಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ" ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಜ.11ರಂದು ಜಗತ್ತಿನ ಅತ್ಯಂತ ದೊಡ್ಡ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ, ಕೆಲವು ಮಂದಿಯಲ್ಲಿ ಮಾತ್ರ ಅಡ್ಡಪರಿಣಾಮ ಕಾಣಿಸಿಕೊಂಡಿದೆ. ದೇಶದಲ್ಲಿ ತಯಾರಾದ ಎರಡು ಲಸಿಕೆಗಳು ಕೂಡಾ ಸುರಕ್ಷಿತವಾಗಿವೆ. ಆದರೆ, ಕೆಲವು ಮಂದಿ ರಾಜಕೀಯ ಉದ್ದೇಶಕ್ಕಾಗಿ ಕೊರೊನಾ ಲಸಿಕೆ ಸುರಕ್ಷಿತವಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ" ಎಂದಿದ್ದಾರೆ.
"ಕೊರೊನಾ ಲಸಿಕೆಯಿಂದ ಕೊರೊನಾವನ್ನು ನಿರ್ನಾಮ ಮಾಡಬಹುದು. ಕೊರೊನಾಕ್ಕೆ ಹೆದರಿ ಬದಲಾಗಿ ಲಸಿಕೆಗಲ್ಲ. ಲಸಿಕೆ ಅಪಾಯಕಾರಿ ಎಂದು ಸುಳ್ಳು ಪ್ರಚಾರ ಮಾಡುತ್ತಿರುವವರಿಗೂ ಕೂಡಾ ಕೊರೊನಾ ಲಸಿಕೆ ನೀಡಬೇಕಾದಂತ ಪರಿಸ್ಥಿತಿ ಎದುರಾಗಲಿದೆ. ಕೊರೊನಾ ಲಸಿಕೆಯ ಬಗ್ಗೆ ಜನತೆಯಲ್ಲಿನ ಭಯ ದೂರ ಮಾಡುವ ಸಲುವಾಗಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ಗಳನ್ನು ಹಂಚಲಾಗುತ್ತಿದೆ" ಎಂದಿದ್ದಾರೆ.
ಮೊದಲ ಸುತ್ತಿನಲ್ಲಿ 3 ಕೋಟಿಗೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಇದಾದ ಬಳಿಕ ಎರಡನೇ ಸುತ್ತಿನಲ್ಲಿ ಚುನಾಯಿತ ಪ್ರತಿನಿಧಿಗಳಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮಂದಿಗೆ ಕೊರೊನಾ ಲಸಿಕೆ ಹಾಕಿಸುವ ಸಾಧ್ಯತೆ ಇದೆ.
"ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಹಾಗೂ ಸಂಪುಟ ಸಚಿವರು, ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಆದರೆ, ರಾಜಕಾರಣಿಗಳಿಗೆ ಕೊರೊನಾ ಲಸಿಕೆ ನೀಡಲು ನಿರ್ದಿಷ್ಟ ಸಮಯದ ನಿಗದಿಯಾಗಿಲ್ಲ" ಎಂದು ಸರ್ಕಾರದ ಮೂಲಗಳು ತಿಳಿಸಿವೆ.