ಬೆಂಗಳೂರು, ಜ.22 (DaijiworldNews/PY): "ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸುಮ್ಮನೆ ಕ್ಷೇತ್ರಕ್ಕೆ ಸುತ್ತು ಹೊಡೆಯುತ್ತಿದ್ದಾರೆ. ಆಗಾಗ ಸಚಿವರ ಮನೆಗೆ ಓಡಾಡುತ್ತಿದ್ದಾರೆ. ಇದನ್ನು ನೋಡಿದರೆ ಅವರ ಬಗ್ಗೆ ಪಾಪ ಎನಿಸುತ್ತದೆ" ಎಂದು ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೆಚ್ಡಿಕೆ ಅವರು ಮೊದಲು ಬಿಜೆಪಿಯನ್ನು ಪ್ರೀತಿ ಮಾಡುತ್ತಿದ್ದರು. ಈಗ ಸಿಎಂ ಅವರ ವಿರುದ್ದವೇ ಮಾತನಾಡುತ್ತಿದ್ದಾರೆ. ಮೊದಲಿನಿಂದಲೂ ನಾನೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಹೆಚ್ಡಿಕೆ ಅವರು ಸಿಎಂ ಆಗಿದ್ದ ಸಂದರ್ಭ ಯಾವುದೇ ಕೆಲಸ-ಕಾರ್ಯ ಮಾಡಿಲ್ಲ. ಈಗ ಸುಮ್ಮನೆ ಕ್ಷೇತ್ರಕ್ಕೆ ಸುತ್ತುಹೊಡೆಯುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
"ನನಗೆ ಹೆಚ್ಡಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಮಾನ ವೈರಿಗಳು. ಈಗ ನಾನು ಸಚಿವನಾಗಿರುವ ಕಾರಣ ಅವರಿಗೆ ಭಯ ಶುರುವಾಗಿದೆ" ಎಂದಿದ್ದಾರೆ.
"ನನಗೆ ಸಿಎಂ ಅವರು ನೀಡಿರುವ ಖಾತೆ ಬಗ್ಗೆ ಸಂತಸ ಇದೆ. ಮೂಲತಃ ನಾನು ಕೃಷಿ ಕುಟುಂಬ ಬಂದವನಾಗಿದ್ದು, ನನಗೆ ನೀರಾವರಿ ಖಾತೆ ಇಷ್ಟ. ನಾನು ಸಮರ್ಥವಾಗಿ ನಿಭಾಯಿಸುತ್ತೇನೆ" ಎಂದು ತಿಳಿಸಿದ್ದಾರೆ.