ಬೆಂಗಳೂರು, ಜ.21 (DaijiworldNews/MB) : ''ರೈತರು ದಂಗೆ ಏಳಲು ಅವಕಾಶ ಮಾಡಿಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲು ಬಯಸುತ್ತೇನೆ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ನಾಡಿನ ರೈತರು ದಂಗೆ ಏಳುತ್ತಾರೆ. ರೈತವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಒತ್ತಾಯಪೂರ್ವಕವಾಗಿ ಹೇರಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನತೆ ಮುಂಬರುವ ಚುನಾವಣೆಯಲ್ಲಿ ಮನೆಗೆ ಕಳುಹಿಸುವುದು ಕೂಡ ಖಚಿತ'' ಎಂದು ಎಚ್ಚರಿಕೆ ನೀಡಿದ್ದಾರೆ.
''ಕಳೆದ 58 ದಿನಗಳಿಂದ ದೆಹಲಿಯಲ್ಲಿ ರೈತರು ಹಗಲು, ರಾತ್ರಿ ಎನ್ನದೆ, ಚಳಿ, ಗಾಳಿ, ಮಳೆ ಲೆಕ್ಕಿಸದೆ ಚಳವಳಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನುಷ್ಯತ್ವ ಇದ್ದಿದ್ದರೆ ಅವರ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರಲಿಲ್ಲ'' ಎಂದು ಟೀಕಿಸಿದ್ದಾರೆ.
''ರೈತರು ತಮ್ಮ ಒತ್ತಾಯಕ್ಕೆ ಬದ್ಧರಾಗಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದೆ. ಹೀಗಾಗಿಯೇ ಸುಪ್ರೀಂಕೋರ್ಟ್ ಮೂರು ಕಾಯಿದೆಗಳಿಗೆ ತಡೆ ಆದೇಶ ನೀಡಿದೆ. ಕಾಯಿದೆಗಳು ಸಂವಿಧಾನಬದ್ಧವಾಗಿದ್ದಿದ್ದರೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತಿರಲಿಲ್ಲ'' ಎಂದು ಹೇಳಿದ್ದಾರೆ.
''ರೈತರು ದಂಗೆ ಏಳಲು ಅವಕಾಶ ಮಾಡಿಕೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲು ಬಯಸುತ್ತೇನೆ. ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಈ ಹಿಂದೆ ದೇಶದ ಜನತೆ ದಂಗೆ ಎದ್ದಿದ್ದರು, ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ'' ಎಂದಿದ್ದಾರೆ.
''ನೂತನ ಕೃಷಿ ಕಾನೂನುಗಳಿಂದ ಕನಿಷ್ಠ ಬೆಂಬಲ ಬೆಲೆ ನಿಂತು ಹೋಗಲಿದೆ, ಕೃಷಿ ಮಾರುಕಟ್ಟೆಗಳು ನಾಶವಾಗಲಿವೆ. ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಣಿದು, ಅವರಿಗೆ ಗುಲಾಮರಾಗಿ ಕೇಂದ್ರದ ಬಿಜೆಪಿ ಸರ್ಕಾರ ಈ ಕಾಯಿದೆಗಳನ್ನು ಜಾರಿಗೆ ತಂದಿದೆಯೇ ಹೊರತು ರೈತರ ಏಳಿಗೆಗಾಗಿ ಅಲ್ಲವೇ ಅಲ್ಲ'' ಎಂದು ದೂರಿದ್ದಾರೆ.
''ಇಂದಿನ ರಾಜಭವನ ಚಲೋ ನಮ್ಮ ಹೋರಾಟದ ಆರಂಭವಷ್ಟೇ. ಮುಂಬರುವ ವಿಧಾನಸಭೆ ಚುನಾವಣೆ ವರೆಗೆ ಹೋರಾಟ ಮುಂದುವರೆಯಲಿದೆ. ರೈತರನ್ನು ಉಳಿಸಬೇಕಾದರೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಬೇಕಾದರೆ ಈ ಕಾಯಿದೆಗಳನ್ನು ವಾಪಸ್ ಪಡೆಯಲೇಬೇಕು'' ಎಂದು ಒತ್ತಾಯಿಸಿದ್ದಾರೆ.
''ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ ಎಂದಾದರೆ ಕಾನೂನು ರೀತ್ಯ ಭರವಸೆ ನೀಡಿ ಎಂದು ಚಳವಳಿ ನಿರತ ರೈತರು ಕೇಳುತ್ತಿದ್ದಾರೆ. ಅದರಂತೆ ಕಾನೂನು ಪ್ರಕಾರ ಭರವಸೆ ನೀಡಲು ಬಿಜೆಪಿ ಸರ್ಕಾರಕ್ಕಿರುವ ಅಡ್ಡಿಯಾದರೂ ಏನು? ಕೇಂದ್ರ ಸರ್ಕಾರ ನಿಜವಾಗಿ ರೈತರ ಪರವಾಗಿದ್ದರೆ ಅವರ ಬೇಡಿಕೆಯನ್ನು ಕೂಡಲೆ ಈಡೇರಿಸಬೇಕು'' ಎಂದು ಆಗ್ರಹಿಸಿದ್ದಾರೆ.
''ಮೂರು ಹೊಸ ಕಾಯ್ದೆಗಳನ್ನು ವಾಪಸ್ ಪಡೆಯುವುದೊಂದೆ ಈಗಿನ ಬಿಕ್ಕಟ್ಟನ್ನು ಬಗೆಹರಿಸಲು ಇರುವ ಏಕೈಕ ಪರಿಹಾರ. ಹಾಗಾಗಿ ಅವುಗಳನ್ನು ವಾಪಾಸು ಪಡೆಯುವ ಜೊತೆಗೆ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವುದಾಗಿಯೂ ಕೇಂದ್ರ ಬಿಜೆಪಿ ಸರ್ಕಾರ ರೈತರಿಗೆ ಭರವಸೆ ನೀಡಬೇಕು'' ಎಂದು ಒತ್ತಾಯಿಸಿದ್ದಾರೆ.
''ರಾಜ್ಯದ ನಾನಾ ಜಿಲ್ಲೆಗಳಿಂದ ರೈತರು ಚಳವಳಿಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೊರಟಿದ್ದರು. ಆದರೆ, ಪೊಲೀಸರು ಅವಕಾಶ ಕೊಟ್ಟಿಲ್ಲ. ಅವಕಾಶ ಕೊಟ್ಟಿದ್ದರೆ 20 ಸಾವಿರಕ್ಕೂ ಹೆಚ್ಚು ರೈತರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು. ಕರ್ನಾಟಕದ ಬಿಜೆಪಿಯ ಈ ಧೋರಣೆಗಳು ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿವೆ'' ಎಂದು ಹೇಳಿದ್ದಾರೆ.