ಭೋಪಾಲ್,ಜ.19 (DaijiworldNews/HR): ಕೊರೊನಾದಿಂದಾಗಿ ತೈಲ ಉತ್ಪಾದನಾ ರಾಷ್ಟ್ರಗಳಲ್ಲಿ ಉತ್ಪಾದನೆ ಕಡಿಮೆಯಾದ ಕಾರಣದಿಂದಾಗಿ ಇಂಧನ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಅವಶ್ಯಕತೆಯ ಶೇ 80ರಷ್ಟು ಕಚ್ಚಾ ತೈಲವನ್ನು ನಾವು ಆಮದು ಮಾಡಿಕೊಳ್ಳಬೇಕಿರುವುದೇ ನಮ್ಮ ಮುಂದಿರುವ ಸವಾಲಾಗಿದೆ, ಕೊರೊನಾದಿಂದಾಗಿ ಅನೇಕ ತೈಲ ಉತ್ಪಾದನಾ ದೇಶಗಳು ಉತ್ಪಾದನೆಯನ್ನು ನಿಲ್ಲಿಸಿವೆ, ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದಾಗಿ ಇಂಧನ ಬೆಲೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ" ಎಂದರು.
ಇನ್ನು"ಇಂಧನ ಬಳಕೆಯು ಹೆಚ್ಚುತ್ತಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳು, ಸೌರಶಕ್ತಿ, ಎಥೆನಾಲ್ ಉತ್ಪಾದನೆ ಇತ್ಯಾದಿಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ" ಎಂದು ಹೇಳಿದ್ದಾರೆ.