ಬೆಂಗಳೂರು,ಜ.16 (DaijiworldNews/HR): "ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟಕ್ಕಿಡಾಗಿರುವ ಪೋಷಕರ ಪರಿಸ್ಥಿತಿಯನ್ನು ಮನಗಂಡು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶುಲ್ಕ ಕಡಿಮೆ ಮಾಡಲು ಒಪ್ಪಿಗೆ ಸೂಚಿಸಿವೆ" ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಹೇಳಿದ್ದಾರೆ.

ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, "ಖಾಸಗಿ ಶಾಲೆಗಳ ಸಂಘಟನೆಗಳಾದ ಕ್ಯಾಮ್ಸ್, ಕುಸ್ಮ, ಕುಪ್ಸ ಹಾಗೂ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದು, ಪೋಷಕರ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಇದ್ದು, ಎರಡೂವರೆ ಗಂಟೆಗಳ ಕಾಲ ಚರ್ಚೆಯ ನಂತರ ಆಡಳಿತ ಮಂಡಳಿಗಳು ಈ ನಿರ್ಧಾರ ಪ್ರಕಟಿಸಿವೆ" ಎಂದು ಅವರು ತಿಳಿಸಿದ್ದಾರೆ.
ಇನ್ನು "ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ನೀಡುವುದಕ್ಕೆ ಆಗದಿರುವ ಪರಿಸ್ಥಿತಿಯನ್ನೂ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ, ಇಲಾಖೆಯ ಆಯುಕ್ತರು ಸಭೆಯ ಸಂಪೂರ್ಣ ವರದಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಿದ ನಂತರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.