ಮಂಡ್ಯ, ಜ.14 (DaijiworldNews/PY): "ಶೀಘ್ರವೇ ವಿಶ್ವನಾಥ್ ಹಾಗೂ ಮುನಿರತ್ನ ಅವರಿಗೆ ಉನ್ನತ ಸ್ಥಾನಮಾನ ನೀಡಲಾಗುವುದು ಎಂದು ಸಿಎಂ. ಬಿಎಸ್.ಯಡಿಯೂರಪ್ಪ ಹೇಳಿದ್ದಾರೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ಹೊಸಹಳ್ಳಿ ಶನೇಶ್ಚರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಗೆ ಸೇರ್ಪಡೆಯಾಗಿದ್ದ 17 ಮಂದಿಯಯಲ್ಲಿ ವಿಶ್ವನಾಥ್ ಹಾಗೂ ಮುನಿರತ್ನ ಅವರಿಗೆ ಶೀಘ್ರವೇ ಉನ್ನತ ಸ್ಥಾನಮಾನ ನೀಡಲಾಗುವುದು ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ. ಈ ಬಗ್ಗೆ ಯಾವ ಅನುಮಾನವೂ ಬೇಡ" ಎಂದರು.
"ವಿಶ್ವನಾಥ್ ಅವರು ನಮ್ಮ ಗುರುಗಳು. ಅವರಿಗೂ ಕೂಡಾ ಸಚಿವ ಸ್ಥಾನ ಸಿಗಬೇಕು ಎಂದು ನಾನು ಸಿಎಂ ಅವರಿಗೆ ಒತ್ತಾಯಿಸುತ್ತೇನೆ" ಎಂದು ಹೇಳಿದರು.
"ಪಕ್ಷದಲ್ಲಿ ಯಾವುದೇ ರೀತಿಯಾದ ಬಂಡಾಯವಿಲ್ಲ. ಯತ್ನಾಳ್ ಅವರ ಹೇಳಿಕೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸಚಿವ ಸ್ಥಾನ ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಅದಕ್ಕೂ ಕೂಡಾ ಒಂದು ಇತಿಮಿತಿ ಇದೆ. ಸಚಿವ ಸಂಪುಟ ಪುನರ್ರಚನೆಯ ಸಂದರ್ಭ ಎಲ್ಲರಿಗೂ ಆಕ್ರೋಶ ಆಗುವುದು ಸಹಜ. ಇವೆಲ್ಲಾ ಶೀಘ್ರವೇ ಸರಿಯಾಗಲಿದೆ" ಎಂದು ತಿಳಿಸಿದರು.
ಸಿಡಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ನನಗೆ ತಿಳಿದಿಲ್ಲ. ರಾಜ್ಯದಲ್ಲಿ ಸಿಎಂ ಬಿಎಸ್ವೈ ಅವರ ನೇತೃತ್ವದಲ್ಲಿ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ" ಎಂದರು.
"ಪಂಚಮಸಾಲಿ ಸ್ವಾಮೀಜಿಗಳು ಪಾದಯಾತ್ರೆ ಕೈಗೊಂಡಿರುವುದು ಸೂಕ್ತವಲ್ಲ. ಪ್ರತಿಭಟನೆ ನಡೆಸುವುದರಿಂದ ಯಾವುದೇ ರೀತಿಯಾದ ಪ್ರಯೋಜನವಿಲ್ಲ. ಸರ್ಕಾರ ಯಾವುದೇ ತಪ್ಪು ಮಾಡಿದೆ ಎನ್ನುವ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಹೇಳಿದರು.