ಬೆಂಗಳೂರು, ಜ. 13 (DaijiworldNews/MB) : ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಸಚಿವ ಸ್ಥಾನ ದೊರೆಯದ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ''ನಮ್ಮ ಪಕ್ಷಕ್ಕೆ ಕೆಲವು ಇತಿಮಿತಿಗಳಿವೆ'' ಎಂದು ಹೇಳಿದ್ದಾರೆ.

ಈ ಬಗ್ಗೆ ರಾಜ್ಯದ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ ವೇಳೆ ಮಾಧ್ಯಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಪಕ್ಷಕ್ಕೆ ಇರುವ ಕೆಲವು ಇತಿಮಿತಿಗಳ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರವನ್ನು ಕೈಗೊಂಡಿದ್ದೇವೆ'' ಎಂದು ಹೇಳಿದ್ದಾರೆ.
''ನಮ್ಮ ಪಕ್ಷದಲ್ಲಿ ಹಲವು ಶಾಸಕರಿದ್ದು ಎಲ್ಲರೂ ಕೂಡಾ ಸಚಿವ ಸ್ಥಾನ ಆಕಾಂಕ್ಷಿಗಳೇ ಆಗಿದ್ದಾರೆ. ಆದರೆ ನಮ್ಮ ಮೊದಲ ಆದ್ಯತೆ ಜನರ, ಸಮಾಜದ ಹಿತಾಸಕ್ತಿ. ರಾಜ್ಯದ ಅಭಿವೃದ್ಧಿ ಮತ್ತು ಬಡವರ ಸುಧಾರಣೆ ನಮ್ಮ ಮತ್ತೊಂದು ಆದ್ಯತೆಯ ವಿಚಾರ, ಇದರೊಂದಿಗೆ ನಮ್ಮ ಕಾರ್ಯಕರ್ತರ ಹಿತಾಸಕ್ತಿಯು ಅತೀ ಮುಖ್ಯ'' ಎಂದರು.
ಎಸ್. ಅಂಗಾರ, ಅರವಿಂದ ಲಿಂಬಾವಳಿ, ಆರ್. ಶಂಕರ್, ಸಿ.ಪಿ. ಯೋಗೀಶ್ವರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.