ಚೆನ್ನೈ, ಜ.11 (DaijiworldNews/PY): "ಪದೇ ಪದೇ ಪ್ರತಿಭಟನೆ ನಡೆಸಿ ರಾಜಕೀಯಕ್ಕೆ ಬರುವಂತೆ ನನ್ನ ಮೇಲೆ ಒತ್ತಡ ಹಾಕುವ ಮೂಲಕ ನನಗೆ ನೋವು ಕೊಡಬೇಡಿ" ಎಂದು ನಟ ರಜನಿಕಾಂತ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ನೂತನ ಪಕ್ಷ ಸ್ಥಾಪಿಸುವ ಮುಖೇನ ರಾಜಕೀಯಕ್ಕೆ ಬರುವುದಾಗಿ ರಜನಿಕಾಂತ್ ಅವರು ಈ ಹಿಂದೆ ಹೇಳಿದ್ದರು. ಆದರೆ, ಆ ನಂತರ ಅವರ ಆರೋಗ್ಯ ಹದಗೆಟ್ಟ ಕಾರಣದಿಂದ ಆ ತೀರ್ಮಾನದಿಂದ ಅವರು ಹಿಂದೆ ಸರಿದಿದ್ದರು. ರಜನಿಕಾಂತ್ ಅವರ ತೀರ್ಮಾನದಿಂದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ತಮ್ಮ ತೀರ್ಮಾವನ್ನು ಹಿಂಪಡೆದು ರಾಜಕೀಯಕ್ಕೆ ಬರಬೇಕು ಎಂದು ಒತ್ತಾಯಿಸಿ ಅಭಿಮಾನ ಸಂಘ ರವಿವಾರ ಪ್ರತಿಭಟನೆ ನಡೆಸಿತ್ತು.
ಈ ಪ್ರತಿಭಟನೆಯ ನಂತರ ಹೇಳಿಕೆ ಬಿಡುಗಡೆ ಮಾಡಿದ ರಜನಿಕಾಂತ್, "ರಾಜಕೀಯಕ್ಕೆ ಪ್ರವೇಶ ಮಾಡುವಂತೆ ಪ್ರತಿಭಟನೆ ಮಾಡಿ ನನ್ನ ಮೇಲೆ ಒತ್ತಡ ಹೇರುವ ಮೂಲಕ ನನಗೆ ನೋವುಂಟುಮಾಡಬೇಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
"ನಾನು ರಾಜಕೀಯ ಬರಲು ಸಾಧ್ಯವಾಗದಿರುವ ಬಗ್ಗೆ ಕಾರಣಗಳನ್ನು ಈಗಾಗಲೇ ತಿಳಿಸಿದ್ದೇನೆ. ನನ್ನ ತೀರ್ಮಾನದ ಬಗ್ಗೆ ನನಗೆ ತಿಳಿದಿದೆ. ಪದೇ ಪದೇ ಈ ರೀತಿಯಾದ ಪ್ರತಿಭಟನೆ ಮಾಡಿ ನನ್ನ ಮೇಲೆ ಇನ್ನಷ್ಟು ಒತ್ತಡ ಹೇರುವ ಮೂಲಕ ನನಗೆ ನೋವು ಮಾಡಬೇಡಿ" ಎಂದಿದ್ದಾರೆ.
"ಪ್ರತಿಭಟನೆಯನ್ನು ಶಿಸ್ತುಬದ್ದ ಹಾಗೂ ಘನತೆಯಿಂದ ನಡೆಸಿದ್ದಕ್ಕೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.