ನವದೆಹಲಿ, ಜ.05 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಕೇಂದ್ರ ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ಜೊತೆಗೆ ಏಳನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದ್ದು, ಇದೀಗ ಎಲ್ಲರ ಕಣ್ಣು ಸುಪ್ರೀಂ ಕೋರ್ಟ್ನತ್ತಿದೆ.

ಮೂರು ಕಾಯ್ದೆಗಳನ್ನು ಪ್ರಶ್ನಿಸಿ ಮತ್ತು ಕಾಯ್ದೆಗಳಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಂಟು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ.
ಇನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ರೈತರ ಸಂಘಟನೆಗಳನ್ನು ಕೂಡ ಕಕ್ಷಿದಾರರನ್ನಾಗಿ ಸೇರಿಸಬೇಕು ಎಂದು ನ್ಯಾಯಾಲಯವು ಹೇಳಿತ್ತು. ಆದರೆ, ತಮಗೆ ಕಾನೂನು ಪರಿಹಾರ ಬೇಕಾಗಿಲ್ಲ, ಸರ್ಕಾರದಿಂದ ಪರಿಹಾರ ಬಯಸಿದ್ದೇವೆ ಎಂದು ರೈತರು ಹೇಳಿದ್ದಾರೆ.
ಈ ಕುರಿತು ಸಭೆಯ ಬಳಿಕ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಮೂರು ಕಾಯ್ದೆಗಳಿಗೆ ಸಂಬಂಧಿಸಿ ವಿವರವಾದ ಚರ್ಚೆಯನ್ನು ರೈತರ ಜತೆ ನಡೆಸಲು ನಾವು ಇಚ್ಚಿಸಿದ್ದೇವೆ, ಆದರೆ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲೇಬೇಕು ಎಂದು ರೈತರು ಪಟ್ಟು ಹಿಡಿದ ಕಾರಣ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ" ಎಂದು ಹೇಳಿದ್ದಾರೆ.