ಕಾಸರಗೋಡು, ಜ. 03 (DaijiworldNews/MB) : ವಿವಾಹ ದಿಬ್ಬಣ ಹೊರಟಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಏಳು ಮಂದಿ ಮೃತ ಪಟ್ಟು, 50 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ರವಿವಾರ ಮಧ್ಯಾಹ್ನ ಕೇರಳ - ಕರ್ನಾಟಕ ಗಡಿಯ ಪಾಣತ್ತೂರು ನಲ್ಲಿ ನಡೆದಿದೆ. ಆ ಪೈಕಿ 11 ಮಂದಿಯ ಸ್ಥಿತಿ ಗಂಭೀರವಾಗಿದೆ.





ಸುಳ್ಯದಿಂದ ಪಾಣತ್ತೂರು ದಾರಿಯಾಗಿ ಕೊಡಗು ಕರಿಕೆಗೆ ತೆರಳುತ್ತಿದ್ದ ಬಸ್ಸು ಪಾಣತ್ತೂರು ಪೆರಿಯರ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿ ಬಿದ್ದು ಈ ಅವಘಡ ನಡೆದಿದೆ.
ಮೃತಪಟ್ಟವರಲ್ಲಿ ಸುಳ್ಯದ ರವಿಚಂದ್ರ ( 40) , ಪತ್ನಿ ಜಯಲಕ್ಷ್ಮಿ ( 39) , ಪುತ್ತೂರಿನ ಸುಮತಿ ( 50), ಬಲ್ನಾಡಿನ ರಾಜೇಶ್ ( 46), ಅರ್ಧಮೂಲೆಯ ನಾರಾಯಣ ರವರ ಪುತ್ರ ಶ್ರೇಯಸ್ (13), ಪುತ್ತೂರಿನ ರಾಜೇಶ್ರವರ ಪುತ್ರ ಆದರ್ಶ್ (14), ಬಂಟ್ವಾಳದ ಶಶಿಧರ ಪೂಜಾರಿ (43) ಎಂದು ಗುರುತಿಸಲಾಗಿದೆ.
ಗಾಯಗೊಂಡ 38 ಮಂದಿಯನ್ನು ಕಾಞ0 ಗಾಡ್ ನಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ 11 ಮಂದಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಬಲ್ನಾಡಿನಿಂದ ಆಲೆಟ್ಟಿದಾರಿಯಾಗಿ ಕರಿಕೆಗೆಒಳರಸ್ತೆಯಲ್ಲಿ ತೆರಳುತ್ತಿದ್ದಾಗ ಜೋಸ್ ಎಂಬವರ ಮನೆ ಮೇಲೆ ಬಸ್ಸು ಬಿದ್ದಿದ್ದು, ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಮತ್ತೊಂದು ಅಪಾಯ ತಪ್ಪಿದೆ ಎನ್ನಲಾಗಿದೆ. ಮನೆಗೆ ಭಾಗಶಃ ಹಾನಿ ಉಂಟಾಗಿದೆ.
ಅಪಘಾತಕ್ಕೀಡಾದ ಎಲ್ಲಾ ಪ್ರಯಾಣಿಕರನ್ನು ಹೊರ ತೆಗೆದು ಪೂಡಂಕಲ್ಲು, ಕಾಞಂಗಾಡ್ ಹಾಗೂ ಇತರ ಆಸ್ಪತ್ರೆಗಳಿಗೆ ತಲುಪಿಸಲಾಗಿದೆ.
ಕೊಡಗು ಕರಿಕೆ ಚಿತ್ತುಕಯ ಎಂಬಲ್ಲಿ ವರನ ಮನೆಯಲ್ಲಿ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮಕ್ಕೆ ಪುತ್ತೂರು ಬಲ್ನಾಡಿನ ವಧುವಿನ ಮನೆಯಿಂದ ದಿಬ್ಬಣ ಹೊರಟಿತ್ತು. ವಧು ಮತ್ತು ಇತರರು ಇನ್ನೊಂದು ವಾಹನದಲ್ಲಿ ಮುಂದೆ ತೆರಳಿದ್ದರು . ಬಸ್ಸಿನಲ್ಲಿ 70 ಕ್ಕೂ ಅಧಿಕ ಪ್ರಯಾಣಿಕರಿದ್ದರು. ರಾಜಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಕ್ಕೆಟ್ಟಾದ ಹಾಗೂ ಇಳಿಜಾರು ರಸ್ತೆಯಾಗಿರುವುದರಿಂದ ಈ ರಸ್ತೆ ಬಗ್ಗೆ ಚಾಲಕನಿಗೆ ಅರಿವು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಮಕ್ಕಳು ಸೇರಿದಂತೆ 70 ಕ್ಕೂ ಅಧಿಕ ಪ್ರಯಾಣಿಕರು ಈ ಬಸ್ಸಿನಲ್ಲಿದ್ದರು. ಬಸ್ಸು ರಸ್ತೆ ಬದಿಯ ಮರವೊಂದಕ್ಕೆ ಬಡಿದು ಬಳಿಕ ಮನೆಯ ಮೇಲೆ ಬಿದ್ದಿದೆ. ಅಪಘಾತದಲ್ಲಿ ಚಾಲಕ ಕೂಡಾ ಗಾಯಗೊಂಡಿದ್ದಾರೆ.
ಗ್ರಾಮೀಣ ಪ್ರದೇಶವಾದುದರಿಂದ ಗಾಯಾಳುಗಳನ್ನು ಕಾಞಂಗಾಡ್, ಪೂಡಂಕಲ್ನ ಸರಕಾರಿ ಆಸ್ಪತ್ರೆಗಳಿಗೆ ತಲುಪಿಸಲಾಯಿತು. ಜೀಪು ಹಾಗೂ ಇತರ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ತಲುಪಿಸಿದ್ದು, ಆರು ಮಂದಿ ಕಾಞಂಗಾಡ್ ಹಾಗೂ ಪೂಡಂಕಲ್ನ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಶಶಿಧರ ಪೂಜಾರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು.
ಅಪಘಾತದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದು, ಗಾಯಗೊಂಡವರಿಗೆ ಸರಕಾರದಿಂದ ಚಿಕಿತ್ಸೆಗೆ ಆದೇಶ ನೀಡಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ, ಮುಂದಾಗಿದ್ದು ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಅಪಘಾತದ ಬಗ್ಗೆ ತನಿಖೆಗೆ ಕೇರಳ ಸರಕಾರ ಆದೇಶ ನೀಡಿದೆ. ಈ ಕುರಿತು ಕಾಞಂಗಾಡ್ ಉಪ ಜಿಲ್ಲಾಧಿಕಾರಿಯವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ. ರಾಜ್ಯ ಸಾರಿಗೆ ಸಚಿವ ಎ.ಕೆ ಶಶೀಂದ್ರನ್ರವರು ಕೂಡಲೇ ವರದಿ ನೀಡುವಂತೆ ಸಾರಿಗೆ ಇಲಾಖೆಗೆ ಆದೇಶ ನೀಡಿದ್ದಾರೆ.
ಸಣ್ಣ ಪುಟ್ಟ ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಅವರವರ ಮನೆಗಳಿಗೆ ತಲುಪಿಸಲು ಕೆಎಸ್ಆರ್ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆಯೊಳಗೆ ಸಂಬಂಧಿಕರಿಗೆ ಬಿಟ್ಟುಕೊಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.