ನವದೆಹಲಿ, ಜ. 03 (DaijiworldNews/MB) : ಭಾರತದಲ್ಲಿ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಕೋವಿಶೀಲ್ಡ್ನ ತುರ್ತು ಬಳಕೆಗೆ ಅನುಮೋದನೆ ದೊರೆತ ಬೆನ್ನಲ್ಲೇ ರವಿವಾರ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಲಾಗಿದೆ.

''ಕೊರೊನಾ ಸೋಂಕಿಗೆ ಆಕ್ಸ್ಫರ್ಡ್ ಯುನಿವರ್ಸಿಟಿ ಹಾಗೂ ಅಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ನೀಡಲಾಗಿದೆ'' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ತಿಳಿಸಿದ್ದರು. ''ಭಾರತದಲ್ಲಿ ಮೊದಲು ಬಳಕೆಗೆ ಅನುಮತಿ ಪಡೆದ ಲಸಿಕೆ ಇದಾಗಿದೆ'' ಎಂದು ಕೂಡಾ ಹೇಳಿದ್ದರು.
ರವಿವಾರ ಭಾರತೀಯ ಔಷಧ ಮಹಾನಿರ್ದೇಶನಾಲಯ (ಡಿಸಿಜಿಐ) ಅಧ್ಯಕ್ಷ ವಿ.ಜಿ ಸೊಮಾನಿ ಪ್ರಮುಖ ಘೋಷಣೆ ಮಾಡಿದ್ದು, ತುರ್ತು ಬಳಕೆಗೆ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ಬಳಸಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮೋದನೆ ನೀಡಬಹುದು ಎಂದು ತಜ್ಞರ ಸಮಿತಿಯು ಅನುಮತಿ ನೀಡಿದ ಹಿನ್ನೆಲೆ ಈ ಲಸಿಕೆಯನ್ನು ಅನುಮೋದನೆ ನೀಡಲಾಗಿದೆ. ಕೇಂದ್ರೀಯ ಔಷಧಿ ನಿಯಂತ್ರಕದ ತಜ್ಞರ ಸಮಿತಿಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಗೆ ಕೆಲವು ಷರತ್ತುಗಳೊಂದಿಗೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ರವಿವಾರ ಈ ಲಸಿಕೆಗೂ ಅನುಮೋದನೆ ನೀಡಲಾಗಿದೆ.