ಇಂಧೋರ್, ಡಿ.31(DaijiworldNews/HR): ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ವಿಮಾನದಲ್ಲಿದ್ದ ತೀವ್ರ ಅನಾರೋಗ್ಯಪೀಡಿತ ಮಗುವನ್ನು ಉಳಿಸುವುದಕ್ಕಾಗಿ ಇಂಧೋರ್ನ ದೇವಿ ಅಹಿಲಿಬಾಯಿ ಹೊಲ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಆದರೆ, ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಸಾಂಧರ್ಭಿಕ ಚಿತ್ರ
7 ತಿಂಗಳ ಮಗುವಿನ ಪೋಷಕರು ಅನಾರೋಗ್ಯ ಪೀಡಿತ ಮಗುವಿಗೆ ಚಿಕಿತ್ಸೆ ನೀಡಲು ಇಂಡಿಗೋ 6E-2248 ವಿಮಾನದ ಮೂಲಕ ಬೆಂಗಳೂರಿಗೆ ಕರೆತರುತ್ತಿದ್ದರು. ಮಗು ಹೈಡ್ರೋಸೆಫಾಲಸ್ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಒಂದು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ಆರೋಗ್ಯ ಸ್ಥಿತಿ ವಿಮಾನದಲ್ಲಿ ಪ್ರಯಾಣಿಸಿದ್ದರಿಂದ ತೀವ್ರ ಹದಗೆಟ್ಟಿದ್ದು, ಆ ಸಂದರ್ಭ ಮಗುವಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದುದರಿಂದ ವಿಮಾನದ ಸಿಬ್ಬಂದಿ ಬುಧವಾರ ಸಂಜೆ 5.55ರ ಸುಮಾರಿಗೆ ಇಂಧೋರ್ನಲ್ಲಿ ವಿಮಾನದ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ತಕ್ಷಣ ಮಗುವನ್ನು ಭಾಟಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಮಗುವಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗ ಅರಬಿಂದೋ ವೈದ್ಯಕೀಯ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಆದರೆ ಅಷ್ಟೊತ್ತಿಗೆ ಮಗು ಮೃತಪಟ್ಟಿತ್ತು ಎಂದು ಅರಬಿಂದೋ ವೈದ್ಯಕೀಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.