ಚಿತ್ರಕೂಟ್, ಡಿ. 31 (DaijiworldNews/MB) : ಸ್ಥಳೀಯ ಕಾಂಗ್ರೆಸ್ ಮುಖಂಡ ಮತ್ತು ಅವರ ಸೋದರಳಿಯನನ್ನು ಅವರ ನೆರೆಹೊರೆಯವರು ಇಲ್ಲಿನ ಉತ್ತರಪ್ರದೇಶದ ಚಿತ್ರಕೂಟ್ನ ಪ್ರಸಿದ್ದಪುರ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

''ಮಾಜಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಟೇಲ್ (55) ತಮ್ಮ ನೆರೆಯ ಕಮಲೇಶ್ ಕುಮಾರ್ ಅವರೊಂದಿಗೆ ಹಳೆಯ ವೈಮನಸ್ಸು ಹೊಂದಿದ್ದರು. ಆರೋಪಿ ಮಂಗಳವಾರ ತಡರಾತ್ರಿ ಕಾಂಗ್ರೆಸ್ ಮುಖಂಡರ ಮನೆಗೆ ಬಂದು ತನ್ನ ರೈಫಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ'' ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಮಿತ್ತಲ್ ತಿಳಿಸಿದ್ದಾರೆ.
''ಗುಂಡೇಟಿನ ಸದ್ದು ಕೇಳಿ ಹೊರಗೆ ಧಾವಿಸಿದ ಪಟೇಲ್ ಅವರ ಸೋದರಳಿಯ ಶುಭಮ್ (28) ಮೇಲೆಯೂ ಆರೋಪಿ ಗುಂಡು ಹಾರಿಸಿದ್ದಾನೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
ಹತ್ಯೆಯಿಂದ ಕೋಪಗೊಂಡ ಪಟೇಲ್ ಅವರ ಕುಟುಂಬ ಸದಸ್ಯರು ಆರೋಪಿಯ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಆದರೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು ಎಂದು ವರದಿ ತಿಳಿಸಿದೆ.
''ಕಮಲೇಶ್ ಕುಮಾರ್ ಪರಾರಿಯಾಗಿದ್ದು, ಆತನನ್ನು ಬಂಧಿಸಲು ತಂಡ ರಚಿಸಲಾಗಿದೆ'' ಎಂದು ಎಸ್ಪಿ ಅಂಕಿತ್ ಮಿತ್ತಲ್ ತಿಳಿಸಿದ್ದಾರೆ.
ಪ್ರಸ್ತುತ ಗ್ರಾಮದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.