ಮೈಸೂರು, ಡಿ. 29 (DaijiworldNews/MB) : ''ಕುರುಬ ಸಮುದಾಯವನ್ನು ಎಸ್ಟಿ ಸೇರ್ಪಡೆಗೆ ನಡೆಸುತ್ತಿರುವ ಹೋರಾಟದಲ್ಲಿ ಸಮಾಜದ ಬಹುತೇಕರು ಇದ್ದಾರೆ. ನನಗೆ ಸಿದ್ದರಾಮಯ್ಯರ ಮನವೊಲಿಸುವ ತೆವಲಿಲ್ಲ'' ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

''ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಕುರುಬ ಸಮುದಾಯ ಎಸ್ಟಿ ಸೇರ್ಪಡೆಗೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ನಾವು ಯಾವುದೇ ಪಕ್ಷವನ್ನು ಪ್ರತಿನಿಧಿಸದೆ ಈ ಹೋರಾಟದಲ್ಲಿ ಜೊತೆಯಾಗಿದ್ದೇವೆ'' ಎಂದರು.
''ಇದು ಜನ ಜಾಗೃತಿ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಕಾಲದಲ್ಲಿ ಕೇಂದ್ರಕ್ಕೆ ಈ ಬಗ್ಗೆ ವರದಿ ಸಲ್ಲಿಸಿದರೂ ಇದು ಆಗಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ ಎಂಬ ಸುದ್ದಿಯಿದ್ದ ಹಿನ್ನೆಲೆ ಗುರುಗಳು ಬಂದು ನಮ್ಮನ್ನು ಕೇಳಿಕೊಂಡರು. ರೇವಣ್ಣ, ಬಂಡೆಪ್ಪ ಕಾಶೆಂಪುರ್ ಎಲ್ಲರೂ ನನ್ನ ನಿವಾಸಕ್ಕೆ ಬಂದು ಹೋರಾಟದಲ್ಲಿ ಜೊತೆಯಾಗುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ನಾನು ಹೋರಾಟ ನಡೆಸಿದ್ದೇನೆ'' ಎಂದು ಹೇಳಿದರು.
''ಯಾರಿಗೆ ಈ ಹೋರಾಟದಲ್ಲಿ ಕೈ ಜೋಡಿಸುವ ಮನಸು ಇದೆ ಅವರು ಬರುತ್ತಾರೆ. ಮನಸಿಲ್ಲದಿಂದ್ರೆ ಬರಲ್ಲ ಅಷ್ಟೇ'' ಎಂದರು.