ಬೆಂಗಳೂರು, ಡಿ. 29 (DaijiworldNews/MB) : ವಿಧಾನ ಪರಿಷತ್ ಸಭಾಪತಿ ಹಾಗೂ ಜೆಡಿಎಸ್ ನಾಯಕ ಎಸ್ ಎಲ್ ಧರ್ಮೇಗೌಡ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ''ನನ್ನ ಸ್ನೇಹಿತ ನನ್ನನ್ನು ಅಗಲಿದ್ದಾರೆ, ಈ ದಿನ ನನಗೆ ಮರೆಯಲಾಗದು'' ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.

File photo
ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಕಡೂರು ತಾಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ ಕೂಡಾ ಪತ್ತೆಯಾಗಿದ್ದು ಅದರಲ್ಲಿ ಇತ್ತೀಚಿಗೆ ವಿಧಾನ ಪರಿಷತ್ನಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ನಡೆದ ಗಲಾಟೆಯ ವೇಳೆ ಧರ್ಮೇಗೌಡ ಅವರನ್ನು ಎಳೆದಾಡಿದ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ.
ಧರ್ಮೇಗೌಡ ಅವರ ನಿಧನಕ್ಕೆ ಸಂಬಂಧಿಸಿ ಬೆಂಗಳೂರಿನ ಜೆ.ಪಿ.ನಗರದಲ್ಲಿ ತಮ್ಮ ನಿವಾಸದ ಹೊರಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ''ಧರ್ಮೇಗೌಡ ನನ್ನ ಒಡಹುಟ್ಟಿದ ಸೋದರನಂತೆ. ಅವರ ತಂದೆ ನಾನಂತೂ ಮಂತ್ರಿಯಾಗಿಲ್ಲ, ನಾನು ಬದುಕಿರುವಾಗ ನನ್ನ ಪುತ್ರನಾದರೂ ಮಂತ್ರಿಯಾಗಬೇಕು ಎಂದು ಹೇಳಿದ್ದರು. ಆದರೆ ಅವರು ಮಂತ್ರಿಯಾಗಲಿಲ್ಲ'' ಎಂದು ಹೇಳಿದರು.
''ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋದ ಸಂದರ್ಭ ಇವರು ಕೂಡಾ ಕಾಂಗ್ರೆಸ್ಗೆ ಹೋಗಲು ತೀರ್ಮಾನಿಸಿದ್ದರು. ಆದರೆ ನಾನು ಹೆಚ್ಡಿಕೆ ಬೇಕಾ, ಎಂಎಲ್ಎ ಸ್ಥಾನ ಬೇಕಾ ಎಂದು ಕೇಳಿದ್ದೆ. ಆ ಮಾತುಗಳನ್ನು ಕೇಳಿದ ಅವರು, ತಮ್ಮ ತೀರ್ಮಾನ ಬದಲಿಸಿ ಜೆಡಿಎಸ್ನಲ್ಲಿಯೇ ಉಳಿದುಕೊಂಡರು'' ಎಂದು ಹೇಳಿ ಕಣ್ಣೀರು ಹಾಕಿದರು.
''ವಿಧಾನ ಪರಿಷತ್ನಲ್ಲಿ ನಡೆದ ಘಟನೆಯನ್ನು ನೆನೆದು ಧರ್ಮೇಗೌಡರು ಮನ ನೊಂದಿದ್ದರು. ಅದನ್ನೇ ಆಗಾಗ ಹೇಳುತ್ತಿದ್ದರು. ರಾಜಕೀಯ ಸ್ಥಿತಿಗತಿ ಬಗ್ಗೆ ಮಾತನಾಡುತ್ತಿದ್ದರು'' ಎಂದು ಹೇಳಿದ ಅವರು, ''ಇದು ರಾಜಕಾರಣದ ಕೊಲೆ'' ಎಂದು ಹೆಚ್ಡಿಕೆ ಆರೋಪಿಸಿದರು.