ಹೈದರಾಬಾದ್, ಡಿ.27 (DaijiworldNews/PY): ಸೂಪರ್ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಅವರು ರವಿವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಜನಿಕಾಂತ್ ಅವರಿಗೆ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಕಾಣಿಸಿಕೊಂಡಿದ್ದು, ಡಿ.25ರ ಶುಕ್ರವಾರದಂದು ಆಸ್ಪತ್ರೆಗೆ ದಾಖಲಾಗಿದ್ದರು.
ರಕ್ತದೊತ್ತಡ ಸ್ಥಿರವಾಗಿದ್ದು, ಆರೋಗ್ಯವು ಕೂಡಾ ಸುಧಾರಿಸಿದೆ ಎಂದು ಅಪೊಲೊ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಸನ್ ಪಿಕ್ಚರ್ ನಿರ್ಮಾಣದ ಅಣ್ಣಾತೆ ತಮಿಳು ಚಿತ್ರದ ಚಿತ್ರೀಕರಣಕ್ಕಾಗಿ ಅವರು ಡಿ.13ರಿಂದ ಹೈದರಾಬಾದ್ನಲ್ಲಿದ್ದರು. ಚಿತ್ರೀಕರಣದ ತಂಡದಲ್ಲಿದ್ದ ನಾಲ್ವರಿಗೆ ಕೊರೊನಾ ದೃಢಪಟ್ಟಿದ್ದು, ಬಳಿಕ ಚಿತ್ರೀಕರಣವನ್ನು ರದ್ದುಗೊಳಿಸಲಾಗಿತ್ತು. ಏತನ್ಮಧ್ಯೆ ರಜನಿಕಾಂತ್ ಅವರ ಆರೋಗ್ಯದಲ್ಲಿ ಏರಿಳಿತ ಕಾಣಿಸಿಕೊಂಡಿತ್ತು. ನಂತರ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿತ್ತು. ಆದರೂ ಕೂಡಾ ಅವರು ಪ್ರತ್ಯೇಕ ವಾಸದಲ್ಲಿದ್ದರು.