ನವದೆಹಲಿ, ಡಿ. 27 (DaijiworldNews/MB) : ''ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಬೇಡಿಕೆ ಅಧಿಕಗೊಂಡಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರವಿವಾರ ನಡೆದ ಈ ವರ್ಷದ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.

ಪ್ರತಿ ತಿಂಗಳ ಕೊನೆಯ ರವಿವಾರ ನಡೆಯುವ ಮನ್ ಕಿ ಬಾತ್ನಲ್ಲಿ ಮಾತನಾಡಿದ ಅವರು, ''ಪ್ರಸ್ತುತ ಮೇಡ್ ಇನ್ ಇಂಡಿಯಾ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಎಲ್ಲಾ ಕೈಗಾರಿಕಾ ಉದ್ಯಮಿಗಳು ಜಾಗತಿಕ ಮಟ್ಟದ ಉತ್ಪನ್ನಗಳನ್ನು ಕೂಡಾ ಉತ್ಪಾದಿಸುವತ್ತ ಈಗ ಗಮನ ಹರಿಸಬೇಕಿದೆ. ದೇಶದಲ್ಲಿ ಈಗ ಆತ್ಮನಿರ್ಭರತೆ ಅಧಿಕವಾಗಿದ್ದು ಈ ನಿಟ್ಟಿನಲ್ಲಿ ದೇಶದಲ್ಲಿ ಉತ್ಪಾದನೆ ಮಾಡಲಾಗುವ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವುದು ಬೇಡ'' ಎಂದು ತಿಳಿಸಿದರು.
''ಹೊಸ ವರ್ಷದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುತ್ತೇವೆ ಸಂಕಲ್ಪ ಮಾಡಿ. ದೇಶದ ಬೆವರಿನ ಶ್ರಮವು ಸ್ವದೇಶಿ ವಸ್ತುಗಳಲ್ಲಿದೆ. ನಿಮ್ಮ ಆ ಒಂದು ಸಂಕಲ್ಪ ದೇಶದ ಜನರಿಗೆ ಸಹಾಯವಾಗುತ್ತದೆ'' ಎಂದರು.
ಈ ಸಂದರ್ಭದಲ್ಲಿ ಕರ್ನಾಟಕದಿಂದ ಬಂದಿರುವ ಪತ್ರವನ್ನು ಪ್ರಧಾನಿ ಮೋದಿ ಓದಿದರು. ಶ್ರೀರಂಗಪಟ್ಟಣದ ಸಮೀಪದ ಮಂದಿರವನ್ನು ಯುವ ಬ್ರಿಗೇಡ್ ಸ್ವಚ್ಛಗೊಳಿಸಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
''ದೇಶದಲ್ಲೀಗ ಆಟಿಕೆಗಳಿಗೆ ಬೇಡಿಕೆ ಹೆಚ್ಚುತ್ತಿದೆ'' ಎಂದು ಹೇಳಿದ ಅವರು, ''ಇದು ಝೀರೋ ಇಫೆಕ್ಟ್- ಝೀರೋ ಡಿಫೆಕ್ಟ್ ಯೋಚನೆಯಿಂದ ಕೆಲಸ ಮಾಡುವ ಸಂದರ್ಭ. ದೇಶದಲ್ಲೀಗ ಹೆಚ್ಚು ಸ್ಟಾರ್ಟ್ ಆಪ್ಗಳು ಹುಟ್ಟಬೇಕಾಗಿದೆ. ಹೊಸ ಯೋಚನೆಗಳು ಅನುಷ್ಠಾನಕ್ಕೆ ಬರಬೇಕು'' ಎಂದರು.
''ದೇಶದಲ್ಲಿ ಯುವಕರನ್ನು ನೋಡಿದಾಗ ನನಗೆ ಆನಂದವಾಗುತ್ತದೆ. ಯುವಕರಲ್ಲಿ ಕ್ಯಾನ್ ಡು, ವಿಲ್ ಡು ಎಂಬ ಎರಡು ಬಲವಾದ ನಂಬಿಕೆಗಳಿವೆ. ಅವರು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ'' ಎಂದು ಹೇಳಿದ ಅವರು, ಇದೇ ವೇಳೆ ಕೊರೊನಾ ಸಂದರ್ಭದಲ್ಲಿ ಶಿಕ್ಷಕರ ಕಲಿಕಾ ವಿಧಾನದಲ್ಲಿ ತೊಡಕುವಿಕೆಯನ್ನು ಶ್ಲಾಘಿಸಿದರು. ''ಮಕ್ಕಳಿಗೆ ಅರ್ಥ ಮಾಡಿಸುವ ಸಲುವಾಗಿ ಶಿಕ್ಷಕರು ಬಹಳ ಪ್ರಯತ್ನ ಮಾಡಿದ್ದಾರೆ. ಹಲವು ಪ್ರಯೋಗಗಳನ್ನು ಮಾಡಿದ್ದಾರೆ'' ಎಂದು ಹೇಳಿದರು.