ನವದೆಹಲಿ, ಡಿ. 26 (DaijiworldNews/MB) : ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕಾಂಗ್ರೆಸ್, ''ಮೂರು ಕೃಷಿ ಕಾನೂನುಗಳ ಬಗ್ಗೆ ಟಿವಿಯಲ್ಲಿ ಸ್ಪಷ್ಟನೆ ನೀಡುವಲ್ಲಿ ಮೋದಿ ನಿರತರಾಗಿದ್ದಾರೆ. ಆದರೆ ಈ ಕಾಯ್ದೆ ವಿರುದ್ದ ಸಾವಿರಾರು ರೈತರು ಕಳೆದ ಒಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಚಳಿಯ ನಡುವೆಯೂ ಪ್ರತಿಭಟನೆ ನಡೆಸುತ್ತಿದ್ದಾರೆ'' ಎಂದು ಸಿಡಿಮಿಡಿಗೊಂಡಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೆವಾಲಾ, ''ಆ ಭಾರೀ ಚಳಿಯ ನಡುವೆಯು ದೆಹಲಿಯ ಗಡಿಯಲ್ಲಿ ರೈತರು ಕಳೆದ 30 ದಿನಗಳಿಂದ ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ. ಈ ಅಗ್ನಿಪರೀಕ್ಷೆಯಲ್ಲಿ 44 ರೈತರು ಸಾವನ್ನಪ್ಪಿದ್ದಾರೆ. ಆದರೆ ಮೋದಿ ಸರ್ಕಾರವು ಬಂಡವಾಳಶಾಹಿಗಳ ಸೇವೆಯಲ್ಲಿ ನಿರತವಾಗಿದೆ. ರೈತರ ಮೇಲೆ ಯಾವುದೇ ಅನುಭೂತಿಯನ್ನು ತೋರಿಸಿಲ್ಲ" ಎಂದು ದೂರಿದರು.
"ಪ್ರತಿಭಟನಾ ನಿರತ ರೈತರು ಪ್ರತಿಭಟಿಸಿ ದಣಿದು ಸುಮ್ಮನಾಗುತ್ತಾರೆ ಎಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರ ಭಾವಿಸಿದೆ. ಪ್ರಧಾನ ಮಂತ್ರಿ ಟಿವಿ ಮೂಲಕ ಸ್ಪಷ್ಟೀಕರಣಗಳನ್ನು ನೀಡುತ್ತಿದ್ದಾರೆ. ಸರ್ಕಾರ ರೈತರ ಶತ್ರುಗಳಾಗಿ ಮಾರ್ಪಟ್ಟಿದೆ" ಎಂದು ಆರೋಪಿಸಿದರು.
"ಬಿಜೆಪಿಯು ರಾಜಕೀಯ ಅಪ್ರಾಮಾಣಿಕತೆ, ಮೋಸ ಮತ್ತು ನಾಟಕಗಳನ್ನೇ ಅವಲಂಬಿಸಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿಗೆ ಯಾವ ಆಸಕ್ತಿಯು ಇಲ್ಲ ಎಂಬುದು ಕಹಿ ಸತ್ಯವಾಗಿದೆ. ಪ್ರಧಾನಿ ಮೋದಿ ಇತ್ತ ರೈತರ ಮೇಲೆ ಜಲ ಫಿರಂಗಿ ಪ್ರಯೋಗಿಸಿ ಹಲ್ಲೆ ನಡೆಸುವಂತೆ ಮಾಡುತ್ತಾರೆ. ಅತ್ತ ಸಮ್ಮಾನ್ ನಿಧಿ ಎಂಬ ನಾಟವಾಡುತ್ತಾರೆ'' ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
"ಮೋದಿ ಸರ್ಕಾರ 2018 ರ ಡಿಸೆಂಬರ್ನಲ್ಲಿ 'ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಯನ್ನು ಪ್ರಾರಂಭಿಸಿತು. ಇದರಲ್ಲಿ ದೇಶದ ಎಲ್ಲಾ ರೈತರ ಬ್ಯಾಂಕ್ ಖಾತೆಗಳಲ್ಲಿ 6,000 ರೂಗಳನ್ನು ಮೂರು ಕಂತುಗಳಲ್ಲಿ ಜಮಾ ಮಾಡಲಾಗುವುದು ಎಂದು ತಿಳಿಸಲಾಯಿತು. ಈ ಯೋಜನೆಯಡಿ, 2018- 19, 88,000 ಕೋಟಿ ರೂ.ಗಳ ಬದಲು 6,005 ಕೋಟಿ ರೂ. ಮಾತ್ರ ಠೇವಣಿ ಇಡಲಾಗಿದೆ'' ಎಂದು ಹೇಳಿದರು.
"ಕಳೆದ ವರ್ಷದ ಲೋಕಸಭಾ ಚುನಾವಣೆಗೆ ಮುನ್ನ 49,196 ಕೋಟಿ ರೂ. ಠೇವಣಿ ಇಡಲಾಗಿದೆ. 2020-21ನೇ ಸಾಲಿನಲ್ಲಿ 38,872 ಕೋಟಿ ರೂ.ಗಳನ್ನು ಠೇವಣಿ ಮಾಡಲಾಗಿದೆ. ಆದರೆ ಬಹಿರಂಗ ಪಡಿಸಿದ ಮೊತ್ತ 88,000 ಕೋಟಿ ರೂಪಾಯಿಯಾಗಿದೆ. ಇಂದು 18,000 ಕೋಟಿ ರೂ.ಗಳನ್ನು ವರ್ಗಾವಣೆ ಮಾಡುವ ಮೂಲಕ, ಈ ಮೂರು ಕಪ್ಪು ಕಾನೂನುಗಳ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರಧಾನಿ ಮತ್ತೆ ವಿಫಲರಾಗಿದ್ದಾರೆ" ಎಂದು ಹೇಳಿದರು.
"5.40 ಕೋಟಿ ರೈತರಿಗೆ ಏಕೆ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನ ದೊರೆಯುತ್ತಿಲ್ಲ? ಈ ರೈತರನ್ನು ಈ ಯೋಜನೆಯ ವ್ಯಾಪ್ತಿಯಿಂದ ಏಕೆ ಹೊರಗಿಡಲಾಗಿದೆ? 14.64 ಕೋಟಿ ರೈತರಲ್ಲಿ, ಕೇವಲ 9.24 ಕೋಟಿ ರೈತರು ಮಾತ್ರ ಏಕೆ ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ?" ಎಂದು ಪ್ರಶ್ನಿಸಿದರು.
"ಇಂದು, ಬಿಜೆಪಿ ಈ ರೈತ ಸಹೋದರರನ್ನು ಭಯೋತ್ಪಾದಕರು, ಪರಾವಲಂಬಿ, 'ತುಕ್ಡೆ-ತುಕ್ಡೆ' ಗ್ಯಾಂಗ್, ದಾರಿ ತಪ್ಪಿದ ಗ್ಯಾಂಗ್ ಮತ್ತು ಖಲಿಸ್ತಾನಿಗಳು ಎಂದು ಬ್ರಾಂಡ್ ಮಾಡುತ್ತಿದೆ. ಕೃಷಿ ಸಚಿವರು ತಮ್ಮ ಪತ್ರದಲ್ಲಿ ರೈತರನ್ನು 'ರಾಜಕೀಯ ಕೈಗೊಂಬೆಗಳು' ಎಂದು ಕರೆಯುವ ಮಟ್ಟಿಗೆ ಹೋಗಿರುವುದು ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ ಅವರು, ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಮತ್ತು ರೈತರ ಬಳಿ ಕ್ಷಮೆಯಾಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.