ತಿರುವನಂತಪುರಂ, ಡಿ.23 (DaijiworldNews/PY): ಕೇರಳದ 21 ವರ್ಷದ ಸಿಸ್ಟರ್ ಅಭಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪಾದ್ರಿ ಥಾಮಸ್ ಕೊಟ್ಟೂರ್ ಹಾಗೂ ಸಿಸ್ಟರ್ ಸೆಫಿಗೆ ಸಿಬಿಐ ವಿಶೇಷ ನ್ಯಾಯಾಲಯ ಡಿ.23ರ ಬುಧವಾರದಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ.22ರ ಮಂಗಳವಾರದಂದು ಇಬ್ಬರನ್ನೂ ಕೂಡಾ ಸಿಬಿಐ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಡಿ.23ರ ಬುಧವಾರದಂದು ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿತ್ತು.
ಸಿಸ್ಟರ್ ಅಭಯಾ ಅವರು, ಕೊಟ್ಟಾಯಂನ ಚರ್ಚ್ವೊಂದರಲ್ಲಿ ನಡೆಯುತ್ತಿದ್ದ ಕೆಲ ಅನೈತಿಕ ಚಟುವಟಿಕೆಗಳನ್ನು ಕಣ್ಣಾರೆ ಕಂಡಿದ್ದು, ಈ ಹಿನ್ನೆಲೆ ಆ ವಿಚಾರ ಬಹಿರಂಗವಾಗಬಾರದು ಎನ್ನುವ ನಿಟ್ಟಿನಲ್ಲಿ ಸಿಸ್ಟರ್ ಅಭಯಾ ಅವರನ್ನು ಕೊಡಲಿಯ ಹಿಡಿಕೆಯಿಂದ ಹೊಡೆದ ಹತ್ಯೆಗೈದಿದ್ದರು.
1992ರ ಮಾರ್ಚ್ 27ರಂದು ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್ನ ಬಾವಿಯಲ್ಲಿ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.
ಅಂದಿನ ಕೊಟ್ಟಾಯಂ ನಗರಸಭೆ ಚೇರ್ಮನ್ ಪಿಸಿ ಚೆರಿಯನ್ ಮಡುಕ್ಕನಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತ್ತನ್ ಪುರಕಲ್ ಅವರು ಈ ಪ್ರಕರಣವನ್ನು ಕೋರ್ಟಿಗೆ ಮನವಿ ಮಾಡಿ ಬಳಿಕ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ಗೆ ವರ್ಗಾಯಿಸಲಾಗಿತ್ತು. ಆದರೆ ಕ್ರೈಂ ಬ್ರಾಂಚ್ ಪೊಲೀಸರು ಕೂಡಾ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಿದ್ದರು.
ಇದಾದ ಬಳಿ ಪೋಷಕರ ವಿರೋಧದ ಪರಿಣಾಮವಾಗಿ 2008ರಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ 28 ವರ್ಷಗಳ ನಂತರ ಸಿಸ್ಟರ್ ಅಭಯಾ ಹತ್ಯೆ ಪ್ರಕರಣಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.