ಮುಂಬೈ, ಡಿ.21 (DaijiworldNews/HR): ಕೇಂದ್ರ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಯೋಚಿಸಿ ಆ ಮೂಲಕ 2024ರ ಲೋಕಸಭಾ ಚುನಾವಣೆಗೆ ಪ್ರಚಾರ ಮಾಡಲು ಉದ್ದೇಶಿಸಿದೆ ಎಂದು ಶಿವಸೇನಾ ಹೇಳಿದೆ.

ಈ ಕುರಿತು ಶಿವಸೇನಾದ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ "ಸಾರ್ವಜನಿಕರ ಹಣದಲ್ಲಿ ರಾಮಮಂದಿರವನ್ನು ನಿರ್ಮಿಸುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಆದರೆ ರಾಮನ ಹೆಸರಿನಲ್ಲಿ ಚುನಾವಣೆಗಾಗಿ ಪ್ರಚಾರವನ್ನು ಮಾಡಲಾಗುತ್ತಿದೆ. ಎಲ್ಲಿವರೆಗೆ ರಾಜಕೀಯ ಪ್ರಚಾರಕ್ಕಾಗಿ ಶ್ರೀ ರಾಮನ ಹೆಸರನ್ನು ಬಳಸುತ್ತೀರಾ" ಎಂದು ಪ್ರಶ್ನಿಸಲಾಗಿದೆ.
ಇನ್ನು ಈ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, "ಇದು ನಮಗೆ ರಾಜಕೀಯ ವಿಷಯವಲ್ಲ. ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಲು ಶಿವಸೇನಾ ಅಡ್ಡಿಪಡಿಸಿತ್ತು,ಈಗ ರಾಮಮಂದಿರ ನಿರ್ಮಾಣಕ್ಕೆ ಜನರು ತಮ್ಮ ಇಚ್ಛೆಯಿಂದಲೂ ದಾನ ಮಾಡುವುದನ್ನು ಕೂಡ ತಡೆಯುತ್ತಿದೆ" ಎಂದಿದೆ.