ನವದೆಹಲಿ, ಡಿ.11 (DaijiworldNews/MB) : ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 16ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ಅವರು ನೀಡುವ ಮಾಹಿತಿಯನ್ನು ಆಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ನನ್ನ ಇಬ್ಬರು ಸಹೋದ್ಯೋಗಿಗಳಾದ ನರೇಂದ್ರ ಸಿಂಗ್ ತೋಮರ್ ಜಿ ಮತ್ತು ಪಿಯೂಷ್ ಗೋಯಲ್ ಜಿ ಅವರು ನೂತನ ಕೃಷಿ ಕಾನೂನುಗಳು ಮತ್ತು ರೈತರ ಬೇಡಿಕೆಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಅದನ್ನು ಕೇಳಬೇಕು'' ಎಂದು ಹೇಳಿದ್ದಾರೆ.
ಪ್ರತಿಭಟನೆ ಬಿಟ್ಟು ಮುಂದಿನ ಸುತ್ತಿನ ಮಾತುಕತೆಗೆ ಬರುವಂತೆ ಸಚಿವರುಗಳು ರೈತರಿಗೆ ಮನವಿ ಮಾಡಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 16ನೇ ದಿನಕ್ಕೆ ಕಾಲಿರಿಸಿದ್ದು ಗೃಹ ಸಚಿವ ಅಮಿತ್ ಶಾರೊಂದಿಗೆ ಔಪಚಾರಿತ ಮಾತುಕತೆ ಸೇರಿದಂತೆ ಕೇಂದ್ರ ಸರ್ಕಾರ ರೈತರೊಂದಿಗೆ ನಡೆಸಿದ ಎಲ್ಲಾ ಮಾತುಕತೆಗಳು ವಿಫಲವಾಗಿದೆ.