ಬೆಂಗಳೂರು, ಡಿ.02 (DaijiworldNews/MB) : "ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಪೈಕಿ ಅಧಿಕ ಮಂದಿ ರೈತರಂತೆ ಕಾಣುತ್ತಿಲ್ಲ" ಎಂಬ ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. ಸಚಿವರ ಈ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ಕಾಂಗ್ರೆಸ್, ''ವಿ.ಕೆ.ಸಿಂಗ್ ಅವರೇ ನಿಮ್ಮ ಸರ್ಕಾರದಲ್ಲಿರುವ ಯಾರೊಬ್ಬರೂ ಜನಪ್ರತಿನಿಧಿಗಳಂತೆ ಕಾಣುತ್ತಿಲ್ಲ'' ಎಂದು ತಿರುಗೇಟು ನೀಡಿದೆ.

ಪ್ರತಿಭಟನಾಕಾರರಲ್ಲಿ ಬಹುತೇಕರು ರೈತರಂತೆ ಕಾಣುತ್ತಿಲ್ಲ ಎಂಬ ವಿ.ಕೆ.ಸಿಂಗ್ ಅವರ ಹೇಳಿಕೆಯ ವರದಿಯೊಂದನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ''ವಿ.ಕೆ.ಸಿಂಗ್ ಅವರೇ ನಿಮ್ಮ ಸರ್ಕಾರದಲ್ಲಿರುವ ಯಾರೊಬ್ಬರೂ ಜನಪ್ರತಿನಿಧಿಗಳಂತೆ ಕಾಣುತ್ತಿಲ್ಲ. ಎಲ್ಲರೂ ದೊಡ್ಡ ಉದ್ಯಮಿಗಳ ಹಿತ ಕಾಯುವ ದಲ್ಲಾಳಿಗಳಂತೆ ಕಾಣುತ್ತಿದ್ದೀರಿ'' ಎಂದು ಟಾಂಗ್ ನೀಡಿದೆ.
''ರೈತರ ಹೋರಾಟ ಅನುಮಾನಿಸುವುದು ನಿಜವಾದ ದೇಶದ್ರೋಹ. ರೈತರ ನೋವಿಗೆ ಸ್ಪಂದಿಸುವ ಯೋಗ್ಯತೆ ಇಲ್ಲದ ನಿಮಗೆ ಅವರ ಬಗ್ಗೆ ಮಾತನಾಡುವ ನೈತಿಕತೆಯೂ ಇಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳವಾರ ರೈತರೊಂದಿಗೆ ಸರ್ಕಾರ ನಡೆಸಿದ ಮಾತುಕತೆ ವಿಫಲವಾದ ಬಳಿಕ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ್ದ ಕೇಂದ್ರ ಸಚಿವ ವಿ.ಕೆ.ಸಿಂಗ್, "ಚಿತ್ರದಲ್ಲಿ ಕಾಣಿಸುತ್ತಿರುವವರ ಪೈಕಿ ಹೆಚ್ಚಿನವರು ರೈತರಂತೆ ಕಾಣಿಸುತ್ತಿಲ್ಲ. ಇವರು ಕೃಷಿ ಕಾನೂನಿಗೆ ಆಕ್ಷೇಪಿಸುತ್ತಿರುವ ರೈತರಲ್ಲ ಬದಲಾಗಿ ಬೇರೆಯವರು. ಕೃಷಿ ಮಸೂದೆಯ ವಿರೋಧಕ್ಕಿಂತಲೂ ಇದರ ಹಿಂದೆ ಕಮಿಷನ್ ಪಡೆಯುವವರಿದ್ದಾರೆ" ಎಂದು ವಿ.ಕೆ.ಸಿಂಗ್ ಹೇಳಿದ್ದರು.