ನವದೆಹಲಿ, ನ.26 (DaijiworldNews/PY): "ಒಂದು ದೇಶ, ಒಂದು ಚುನಾವಣೆ ಎನ್ನುವುದು ಚರ್ಚೆ ಮಾಡುವ ವಿಚಾರವಲ್ಲ. ದೇಶಕ್ಕೆ ಇದರ ಅಗತ್ಯ ಇದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂವಿಧಾನದ ದಿನದ ಅಂಗವಾಗಿ ನಡೆದ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, "ದೇಶದ ವಿವಿಧ ಭಾಗಗಳಲ್ಲಿ ವರ್ಷದಲ್ಲಿ ಹಲವು ಚುನಾವಣೆಗಳು ನಡೆಯುತ್ತಿರುತ್ತವೆ. ಇದರಿಂದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಇದರ ಬಗ್ಗೆ ಅಧ್ಯಯನ ನಡೆಯಬೇಕಿದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಮಾರ್ಗದರ್ಶಕರಾಗಿ ತಮ್ಮ ಕಾರ್ಯ ನಿರ್ವಹಿಸಬಹುದು" ಎಂದಿದ್ದಾರೆ.
"ಲೋಕಸಭೆ, ವಿಧಾನಸಭೆ ಹಾಗೂ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಒಂದೇ ಮತದಾರರ ಪಟ್ಟಿ ಅನ್ನು ಜಾರಿಗೆ ತರಬೇಕು. ಪ್ರತ್ಯೇಕವಾದಂತ ಮತದಾರರ ಪಟ್ಟಿಯಿಂದ ಹಣ ಹಾಗೂ ಮಾನವ ಸಂಪನ್ಮೂಲ ವ್ಯರ್ಥವಾಗುತ್ತದೆ" ಎಂದು ತಿಳಿಸಿದ್ದಾರೆ.