ಚೆನ್ನೈ, ನ. 26 (DaijiworldNews/MB) : ನಿವಾರ್ ಚಂಡಮಾರುತ ಗುರುವಾರ ಬೆಳಗ್ಗೆ ಸುಮಾರು 2.30 ಗಂಟೆಗೆ ಪುದುಚೇರಿ ಕರಾವಳಿಯನ್ನು ಅಪ್ಪಳಿಸಿದೆ. ಮುಂದಿನ ಮೂರು ಗಂಟೆಗಳ ಕಾಲ ಚಂಡಮಾರುತದ ತೀವ್ರತೆ ದುರ್ಬಲವಾಗಿರುತ್ತದೆ ಎಂದು ಹವಾಮಾನ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಹಾಗೆಯೇ ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು, ಮುಂದಿನ ಕೆಲವು ಗಂಟೆಯಲ್ಲಿ ನಿವಾರ್ ಚಂಡಮಾರುತದ ತೀವ್ರತೆ ದುರ್ಬಲವಾಗುತ್ತದೆ. ಈವರೆಗೂ ಪುದುಚೇರಿಯಲ್ಲಿ 233 ಮಿ.ಮೀಟರ್ ಹಾಗೂ ಕಡಲೂರಿನಲ್ಲಿ 237 ಮಿ.ಮೀಟರ್ ಮಳೆಯಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಚೆನ್ನೈ, ಪುದುಚೇರಿ, ನಾಗಪಟ್ಟಣಂ, ಕಾಂಚೀಪುರಂ, ಚಿದಂಬರಂ, ತಿರುವಲ್ಲೂರು, ಚೆಂಗಲ್ಪಟ್ಟು ಸೇರಿದಂತೆ ತಮಿಳುನಾಡಿನ 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರವೂ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ನಿವಾರ್ ಚಂಡಮಾರುತ ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ 7 ಕಿ.ಮೀ. ವೇಗದಲ್ಲಿ ಸಾಗುತ್ತಿತ್ತು. ಬಳಿಕ ಸಂಜೆ 5 ಗಂಟೆಯ ಹೊತ್ತಿಗೆ ವೇಗವನ್ನು 16 ಕಿ.ಮೀ.ಗೆ ಹೆಚ್ಚಳವಾಗಿದೆ. ಚಂಡಮಾರುತ ಭೂಮಿಗೆ ಅಪ್ಪಳಿಸುವ ವೇಳೆ ಗಾಳಿಯ ವೇಗ ಗಂಟೆಗೆ 60–70 ಕಿ.ಮೀ. ಆಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ತಮಿಳುನಾಡಿನ ಹಲವು ಕಡೆಗಳಲ್ಲಿ ಒಟ್ಟು 465 ಆಂಬುಲೆನ್ಸ್ಗಳು ಈಗಲೇ ಸಜ್ಜಾಗಿ ನಿಂತಿದೆ.